ಯು.ಟಿ.ಖಾದರ್ ಅವರು ದೇಶದ ಎಲ್ಲಾ ಸಭಾಧ್ಯಕ್ಷರಿಗೆ ಮಾದರಿ : ಶಶಿಧರ್ ಹೆಗ್ಡೆ

ಮಂಗಳೂರು : ಇಂದಿನವರೆಗೂ ಸಾಮಾನ್ಯ ಜನರಿಗೆ ಸ್ಪೀಕರ್ ಕಚೇರಿ ಎಲ್ಲಿದೆ ಎಂದು ತಿಳಿದಿರಲಿಲ್ಲ, ಆದರೆ ಈಗ ಬಹುತೇಕ ಎಲ್ಲಾ ದಿನಗಳಲ್ಲೂ ಸ್ಪೀಕರ್ ಕಚೇರಿ ತಮ್ಮ ಸಮಸ್ಯೆಗಳೊಂದಿಗೆ ಬಂದ ಸಾಮಾನ್ಯ ಜನರಿಂದ ತುಂಬಿದೆ. ಈ ರೂಪಾಂತರದ ಕೀರ್ತಿ ಯು.ಟಿ.ಖಾದರ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹೇಳಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ಎಲ್ಲಾ ಶಾಸಕರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದರಿಂದ ಹಿಡಿದು ರಾತ್ರಿ 12 ಗಂಟೆಯವರೆಗೆ ಅಧಿವೇಶನ ನಡೆಸುವವರೆಗೆ, ಯು.ಟಿ.ಖಾದರ್ ಅವರು ದೇಶದ ಎಲ್ಲಾ ಸಭಾಧ್ಯಕ್ಷರಿಗೆ ಮಾದರಿಯಾಗಿದ್ದಾರೆ. ಸ್ಪೀಕರ್ ಆಗಿರುವವರು ಯಾವಾಗಲೂ ವಿಪಕ್ಷದ ಮಿತ್ರ ಆಗಿರಬೇಕು. ಈ ಮಾತನ್ನು ಅಕ್ಷರ ಪಾಲಿಸಿಕೊಂಡು ಬರುತ್ತಿರುವವರು ಸ್ಪೀಕರ್ ಯು.ಟಿ.ಖಾದರ್, ಈ ವಿಷಯದಲ್ಲಿ ಈ ಹಿಂದಿನವರು ಹೇಗಿದ್ದರೂ ಎನ್ನುವುದು ನಾನು ಹೆಚ್ಚು ಚರ್ಚೆಗೆ ಹೋಗುವುದಿಲ್ಲ. ಆದರೆ ಯು.ಟಿ.ಖಾದರ್ ಸ್ಪೀಕರ್ ಆದ ಬಳಿಕ ವಿಧಾನಸೌಧದ ವಿಧಾನಸಭೆಯ ಕಲಾಪದ ಚಿತ್ರಣವೇ ಬದಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಇದ್ದರೆ ಹೀಗಿರಬೇಕು ಎಂದು ಅವರ ಉಪನ್ಯಾಸ ಕೇಳಲು ವಿದೇಶದಿಂದ ಕರೆ ಬರುತ್ತಿದೆ. ವಿದೇಶಿಯರು ಇಲ್ಲಿಗೆ ಬಂದು ಅವರ ಕಾರ್ಯ ವಿಧಾನವನ್ನು ನೋಡಿ ಹೊಗಳಿ ಹೋಗುತ್ತಿದ್ದಾರೆ. ಇದನ್ನೆಲ್ಲಾ ನೋಡಿ ವಿಪಕ್ಷ ನಾಯಕರಿಗೆ ಸಹಿಸಲಾಗುತ್ತಿಲ್ಲ ಎಂದೆನಿಸುತ್ತಿದೆ. ಅದಕ್ಕಾಗಿ ಸ್ಪೀಕರ್ ಯು.ಟಿ.ಖಾದರ್ ಅವರ ಮೇಲೆ ವೃತಾ ಆರೋಪಗಳನ್ನು ಮಾಡುತ್ತಿದ್ದಾರೆ.
ಶಾಸಕರು ಕಲಾಪಗಳಲ್ಲಿ ಸಕ್ರಿಯರಾಗಿರುವಂತೆ ಮಾಡುವುದು ಯು.ಟಿ.ಖಾದರ್ ಅವರ ಮುಖ್ಯ ಉದ್ದೇಶ. ಅದನ್ನು ನಿಭಾಯಿಸುವ ದೆಸೆಯಲ್ಲಿ ತನಗೆ ಸಾಧ್ಯವಿರುವ ಅಧಿಕಾರ ವ್ಯಾಪ್ತಿಯನ್ನು ಮೊದಲ ಬಾರಿಗೆ ಬಳಸಿ ಶಿಸ್ತು ಜಾರಿಗೆ ತಂದ ಶ್ರೇಯ ಯು.ಟಿ.ಖಾದರ್ ಅವರಿಗೆ ಸಲ್ಲುತ್ತದೆ. ಇದು ತಮ್ಮಿಂದ ಸಾಧ್ಯವಾಗಲಿಲ್ಲ ಎಂಬ ಹೊಟ್ಟೆಕಿಚ್ಚಿನ ಸ್ವಭಾವದ ವಿಪಕ್ಷ ಮಿತ್ರರು ಖಾದರ್ ಅವರ ಮೇಲೆ ಆರೋಪಿಸುತ್ತಾರೆ. ಯು.ಟಿ.ಖಾದರ್ ಅವರು ತಮಗೆ ನೀಡಲಾದ ಯಾವುದೇ ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.







