ಗ್ರಾಮೀಣ ಸೇವಾ ನಿರತ ವೈದ್ಯರ ವೇತನ ಕಡಿತ: ಎಐಡಿಎಸ್‌ಒ ಖಂಡನೆ

ಮಂಗಳೂರು, ಅ.31: ಗ್ರಾಮೀಣ ಸೇವೆ ವೈದ್ಯರ ವೇತನವನ್ನು ಕಡಿತಗೊಳಿಸುವ ರಾಜ್ಯ ಸರಕಾರದ ಜನವಿರೋಧಿ ನಿರ್ಧಾರವನ್ನು ಎಐಡಿಎಸ್‌ಒ ತೀವ್ರವಾಗಿ ಖಂಡಿಸಿದೆ. ಇತ್ತೀಚಿನ ಅಧಿಸೂಚನೆಯ ಪ್ರಕಾರ ಎನ್‌ಎಚ್‌ಎಂ ವೈದ್ಯರ ವೇತನವನ್ನು 75,000 ರೂ.ನಿಂದ 60,000ಕ್ಕೆ ಮತ್ತು ಎಚ್‌ಎಫ್‌ಡಬ್ಲ್ಯುಎಸ್ ವೈದ್ಯರ ವೇತನವನ್ನು 62,666 ರಿಂದ 60,000 ರೂ.ಗೆ ಇಳಿಸಲಾಗಿದೆ.
ಕೌನ್ಸೆಲಿಂಗ್ ಮತ್ತು ಪೋಸ್ಟಿಂಗ್ ಪ್ರಕ್ರಿಯೆಯ ನಂತರ ತೆಗೆದುಕೊಂಡ ಈ ನಿರ್ಧಾರವು ಈ ಮೊದಲು ಘೋಷಿಸ ಲಾದ ವೇತನ ಶ್ರೇಣಿಯ ಆಧಾರದ ಮೇಲೆ ಗ್ರಾಮೀಣ ಮತ್ತು ಕಷ್ಟಕರ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆ ಮಾಡಿಕೊಂಡಿರುವ ಯುವ ವೈದ್ಯರಿಗೆ ಅನ್ಯಾಯದ ಮತ್ತು ನೈತಿಕ ಸ್ಥೈರ್ಯ ಕುಗ್ಗಿಸುವ ಕ್ರಮವಾಗಿದೆ.
ಗ್ರಾಮೀಣ ಕರ್ನಾಟಕವು ವೈದ್ಯಕೀಯ ವೃತ್ತಿಪರರ ಮತ್ತು ಆರೋಗ್ಯ ಮೂಲಸೌಕರ್ಯದ ತೀವ್ರಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಇಂತಹ ನಡೆಯು ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ವೈದ್ಯಕೀಯ ಪದವೀಧರರು ಗ್ರಾಮೀಣ ಸೇವೆಯನ್ನು ಕೈಗೊಳ್ಳುವ ಬಯಕೆಯನ್ನು ಕುಗ್ಗಿಸುತ್ತದೆ. ಅವರ ಬದ್ಧತೆ ಯನ್ನು ಶ್ಲಾಘಿಸುವ ಬದಲು, ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುವವರನ್ನು ಸರಕಾರವು ಶಿಕ್ಷಿಸುತ್ತಿದೆ. ಹಾಗಾಗಿ ರಾಜ್ಯ ಸರಕಾರವು ತಕ್ಷಣ ಈ ನಿರ್ಧಾರವನ್ನು ಹಿಂಪಡೆಯಬೇಕು ಎಐಡಿಎಸ್‌ಒ ಎಂದು ಜಿಲ್ಲಾ ಸಂಚಾಲಕ ವಿನಯ್‌ಚಂದ್ರ ಆಗ್ರಹಿಸಿದ್ದಾರೆ.







