ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಲಕರು ರೂಪಿಸಬೇಕು: ಮೀನಾಕ್ಷಿ ಸುಂದರಂ

ಉಳ್ಳಾಲ: ಬೀಡಿ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ಏರಿಕೆಯಾದ ತುಟ್ಟಿಭತ್ತೆ ಕನಿಷ್ಠ ಕೂಲಿ ಪಾವತಿಯ ಬೇಡಿಕೆ ಇಟ್ಟು ಸಿಐಟಿಯು ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಆರನೇ ದ.ಕ. ಜಿಲ್ಲಾ ಸಮ್ಮೇಳನ ಕೊಲ್ಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಸಿಗಲು ಒಂದು ಸೆಸ್ ನ್ನು ಬೀಡಿ ಮಾಲಕರು ಸರಕಾರಕ್ಕೆ ಕೊಡಬೇಕು. ಈಗ ಸೆಸ್ ನೀಡುವುದನ್ನು ಮಾಲಕರು ನಿಲ್ಲಿಸಿದ್ದಾರೆ. ಈ ಕಾರಣದಿಂದ ಕಾರ್ಮಿಕರಿಗೆ ಕೆಲಸ, ಕೂಲಿ ಸಿಗುತ್ತಿಲ್ಲ. ಈ ಬೀಡಿ ಕಾರ್ಮಿಕರಿಗೆ ಪರ್ಯಾಯ ಜೀವನವನ್ನು ಮಾಲಕರು ರೂಪಿಸಬೇಕು ಎಂದರು.
ಬೆರಳೆಣಿಕೆಯಷ್ಟು ಬಂಡವಾಳಶಾಹಿಗಳ ಕೈಯಲ್ಲಿ ಈ ದೇಶದ ಸಂಪತ್ತು ಸೇರಿಕೊಂಡಿದೆ. ಬಹುಪಾಲು ಸಂಖ್ಯೆಯಲ್ಲಿ ಬಡವರು ಇಲ್ಲಿದ್ದಾರೆ. ಹೀಗೆ ಮುಂದುವರಿದರೆ ಅಭಿವೃದ್ಧಿ ಕಾಣದು ಎಂದರು.
ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ ರಾಜ್ಯ ಸರಕಾರಕ್ಕೆ ಸಂಕಷ್ಟ ಬಂದಿಲ್ಲ. ಆದರೆ ಏನು ಕೊಡದ ಕೇಂದ್ರ ಸರಕಾರಕ್ಕೆ ಸಂಕಷ್ಟ ಬಂದಿದೆ. ಕರ್ನಾಟಕ ರಾಜ್ಯ ಸರಕಾರದಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪ ಮಾಡುವ ಬಿಜೆಪಿಯವರಿಗೆ ಜನಪರ ಕೆಲಸ ಯಾಕೆ ಮಾಡಲಾಗಿಲ್ಲ ಎಂದು ಮೀನಾಕ್ಷಿ ಸುಂದರಂ ಪ್ರಶ್ನಿಸಿದರು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಬೀಡಿ ಕಾರ್ಮಿಕರ ಸಂಕಷ್ಟದ ಬಗ್ಗೆ ಅರ್ಥ ಮಾಡಿಕೊಳ್ಳುವವರು ಇಲ್ಲವಾಗಿದ್ದಾರೆ. ಸರಕಾರ ಕೂಡ ಕಾರ್ಮಿಕ ವಿರೋಧಿ ನೀತಿ ಜಾರಿ ಮಾಡಿದೆ. ಕನಿಷ್ಠ ಕೂಲಿ ನೀಡುವ ವಿಚಾರದಲ್ಲಿ ಸರಕಾರ ಮೌನ ಆಗಿದೆ ಎಂದು ಆರೋಪಿಸಿದರು.
ಬೀಡಿ ಕಾರ್ಮಿಕರ ಪರ ಹಲವು ಹೋರಾಟ ಮಾಡಿದರೂ ನಮ್ಮ ಸಂಸದರು ಮಾತನಾಡುತ್ತಿಲ್ಲ. ಈ ಜಗತ್ತು ದುಡಿಯುವವರ ಶ್ರಮದ ಮೇಲೆ ನಿಂತಿದೆ. ಈ ದುಡಿಯುವ ವರ್ಗದ ಜನರನ್ನು ಮೂಲೆಗುಂಪು ಮಾಡುವ ಕೆಲಸ ಆಗುತ್ತಿದೆ. ಈ ವರ್ಗವನ್ನು ಉಳಿಸುವ ಕೆಲಸ ನಾವು ಹೋರಾಟದ ಮೂಲಕ ಮಾಡಬೇಕು ಎಂದು ಕರೆ ನೀಡಿದರು.
ಬೇಬಿ ಶೆಟ್ಟಿ ಮಂಜೇಶ್ವರ ಮಾತನಾಡಿದರು.
ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಪದ್ಮಾವತಿ ಕುತ್ತಾರ್ ಧ್ವಜಾರೋಹಣ ನೆರವೇರಿಸಿದರು .
ಕರ್ನಾಟಕ ರಾಜ್ಯ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಸಯ್ಯದ್ ಮುಜೀಬ್, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಪದ್ಮಾವತಿ ಎಸ್. ಶೆಟ್ಟಿ, ಜಯಂತಿ ಶೆಟ್ಟಿ, ರಮಣಿ ಮೂಡುಬಿದಿರೆ, ಸಿಐಟಿಯು ಗೌರವಾಧ್ಯಕ್ಷ ಬಿ.ಲೋಕಯ್ಯ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಜಯಂತ್ ನಾಯಕ್, ಕೋಶಾಧಿಕಾರಿ ಪದ್ಮಾವತಿ ಶೆಟ್ಟಿ, ಪ್ರೇಮಾ ಶೆಟ್ಟಿ ಮಂಜೇಶ್ವರ, ಕವಿರಾಜ ಉಡುಪಿ, ಬಿ.ಎಂ.ಭಟ್ ಬೆಳ್ತಂಗಡಿ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು ಸ್ವಾಗತಿಸಿ ವರದಿ ವಾಚಿಸಿದರು. ಪ್ರಮೋದಿನಿ ವಂದಿಸಿದರು.







