ಯುನಿವೆಫ್‌ನಿಂದ ಬೆಂಗಳೂರಿನಲ್ಲಿ ವಿಚಾರಗೋಷ್ಠಿ

ಮಂಗಳೂರು: ಪ್ರವಾದಿ ಮುಹಮ್ಮದ್‌ರ ವ್ಯಕ್ತಿತ್ವವನ್ನು ನಿಷ್ಪಕ್ಷವಾಗಿ ಅಧ್ಯಯನ ಮಾಡಿದಾಗ ಅವರು ಮಾಡಿರುವ ಸಮಾಜ ಸುಧಾರಣೆಗಳು, ಹೆಣ್ಣಿಗೆ ನೀಡಿರುವ ಸ್ಥಾನಮಾನ, ಮನುಷ್ಯ ಸಂಬಂಧಗಳ ಸೂಕ್ಷ್ಮಗಳನ್ನು ಅವರು ನಿಭಾಯಿಸಿದ ರೀತಿ ಇವೆಲ್ಲವೂ ಗಮನ ಸೆಳೆಯದೆ ಇರಲು ಸಾಧ್ಯವೇ ಇಲ್ಲ. ಮುಹಮ್ಮದ್ ಎಂಬ ಮಹಾನ್ ವ್ಯಕ್ತಿಯನ್ನು ಒಪ್ಪಿಕೊಳ್ಳುವುದಕ್ಕೆ, ಅವರನ್ನು ಪ್ರೀತಿಸುವುದಕ್ಕೆ ಧರ್ಮ ತಡೆಯಾಗಲಾರದು ಎಂದು ಸಾಹಿತಿ ಯೋಗೇಶ್ ಮಾಸ್ಟರ್ ಹೇಳಿದ್ದಾರೆ.
ಯುನಿವೆಫ್ ಕರ್ನಾಟಕ 2025ರ ಸೆಪ್ಟೆಂಬರ್ 19 ರಿಂದ 2 ಜನವರಿ 2026 ರ ವರೆಗೆ 100 ದಿನಗಳ ಕಾಲ ಹಮ್ಮಿಕೊಂಡಿರುವ 20 ನೇ ವರ್ಷದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಡಿ.13 ರಂದು ಬೆಂಗಳೂರಿನ ಬ್ಯಾರಿ ಸೌಹಾರ್ದ ಭವನದಲ್ಲಿ ‘ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಾನು ಪ್ರೀತಿಸುವ ಪ್ರವಾದಿ ಎಂಬ ಪುಸ್ತಕ ರಚಿಸುವ ಮೂಲಕ ತನ್ನ ಗೌರವವನ್ನು ಪ್ರಕಟಿಸಲು ಸಿದ್ಧನಾಗಿದ್ದೇನೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿ ಸಿ ಎಸ್‌ಐ ಬೆಂಗಳೂರು ಇದರ ಉಸ್ತುವಾರಿ ರೆ. ಡಾ. ಡಿ. ಮನೋಹರ್ ಚಂದ್ರ ಪ್ರಸಾದ್ ಅವರು ಮಾತನಾಡಿ, ಮಾನವೀಯತೆಯೇ ಎಲ್ಲಾ ಧರ್ಮಗಳ ಸಾರ. ಪ್ರೀತಿ, ಪ್ರೇಮ, ಸಾಮರಸ್ಯವೇ ಪ್ರವಾದಿಗಳ ಬೋಧನೆಯಾಗಿತ್ತು. ಮಹಾಪುರುಷರುಗಳನ್ನು ಕೇವಲ ಒಂದು ಕಾಲಕ್ಕೆ ಸೀಮಿತಗೊಳಿಸದೆ ಅವರ ವ್ಯಕ್ತಿತ್ವಗಳನ್ನು ಸಾರ್ವಕಾಲಿಕವಾಗಿಸಿದಾಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಅಪಪ್ರಚಾರಗಳನ್ನು ವ್ಯಾಪಕಗೊಳಿಸಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನಗಳ ಮಧ್ಯೆ ನಾವು ನಮ್ಮ ಹಿತೈಷಿಗಳು ಯಾರು, ವಿರೋಧಿಗಳು ಯಾರು ಎಂಬುದನ್ನು ನಿಖರವಾಗಿ ಅರಿಯಬೇಕಾಗಿದೆ. ಯಾವುದೇ ರಾಜಕೀಯ ಪಕ್ಷಗಳನ್ನೂ ಅವಲಂಭಿಸದೆ ಯುವಕರು ತಾವಾಗಿಯೇ ಈ ಅಪಪ್ರಚಾರಗಳನ್ನು ತಡೆಯುವ, ಮಿಥ್ಯ ಅಪಪ್ರಚಾರಗಳನ್ನು ಸತ್ಯದ ಮೂಲಕ ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಪರಿವರ್ತನೆ ಯುವಕರಿಂದಲೇ ಸಾಧ್ಯ ಎಂದು ಹೇಳಿದರು.
ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಬೆಂಗಳೂರು ಇದರ ಅಧ್ಯಕ್ಷ ಬಿ. ಶಂಸುದ್ದೀನ್ ಅಡ್ಡೂರ್, ಬೆಂಗಳೂರು ಬ್ಯಾರಿಸ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಬಿ. ಶಬೀರ್ ಬ್ರಿಗೇಡ್, ಎಂಎಂವೈಸಿ ಬೆಂಗಳೂರು ಅಧ್ಯಕ್ಷ ಬಿ. ಅಬೂಬಕರ್ ಎಚ್ ಉಪಸ್ಥಿತರಿದ್ದರು.
ಉಮರ್ ಮುಖ್ತಾರ್ ಕಿರಅತ್ ಪಠಿಸಿದರು. ಮುಹಮ್ಮದ್ ಹುಝೈಫ್ ಅನುವಾದಿಸಿದರು. ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ಸೈಫುದ್ದೀನ್ ವಿಷಯ ಮಂಡಿಸಿದರು. ಸೀರತ್ ಅಭಿಯಾನ ಸಂಚಾಲಕ ಯು . ಕೆ. ಖಾಲಿದ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.







