ಯುನಿವೆಫ್ - ಕುದ್ರೋಳಿಯಲ್ಲಿ ಸೀರತ್ ಸಮಾವೇಶ

ಮಂಗಳೂರು: ಯುನಿವೆಫ್ ಕರ್ನಾಟಕ 19 ಸೆಪ್ಟೆಂಬರ್ 2025 ರಿಂದ 2 ಜನವರಿ 2026 ರ ವರೆಗೆ “ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ 100 ದಿನಗಳ ಕಾಲ ಹಮ್ಮಿಕೊಂಡಿರುವ 20 ನೇ ವರ್ಷದ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಅಭಿಯಾನದ ಸೀರತ್ ಸಮಾವೇಶವು ಕುದ್ರೋಳಿಯ A1 ಭಾಗ್ ನಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮುಸ್ಲಿಮ್ ಲೀಗ್ ಮಂಗಳೂರು ಇದರ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ಇವರು ಮಾತನಾಡಿ, "ಪ್ರವಾದಿ ಮುಹಮ್ಮದ್ (ಸ) ಅಂದಿನ ಅನಾಗರಿಕ ಜನರ ಶೋಷಣೆಯಿಂದ ಜನಸಾಮಾನ್ಯರನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ವಿಮೋಚನೆಗೊಳಿಸಿದ ಆ ಮಾದರಿಯನ್ನು ಯುನಿವೆಫ್ ಕರ್ನಾಟಕ ಮುಂದುವರಿಸಿರುವುದು ಶ್ಲಾಘನೀಯ" ಎಂದು ಹೇಳಿದರು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ”ಶೋಷಣೆಯ ವಿರುದ್ಧ ಪ್ರವಾದಿ (ಸ) ಯ ನಡೆ” ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿ, "ಶೋಷಣೆಯ ವಿರುದ್ಧ ಎಲ್ಲರೂ ಧ್ವನಿಯೆತ್ತಬೇಕಾದ ಕಾಲ ಸನ್ನಿಹಿತವಾಗಿದೆ. ಮನುಕುಲದ ಉದ್ಧಾರಕ್ಕಾಗಿ ಸೃಷ್ಟಿಸಲ್ಪಟ್ಟ ಸಮುದಾಯ ಆ ಉದ್ದೇಶವನ್ನು ಈಡೇರಿಸುವಲ್ಲಿ ಮುತುವರ್ಜಿ ವಹಿಸಬೇಕಾಗಿದೆ. ಜನರಿಗೆ ಅವರ ಉದ್ದೇಶವನ್ನು ನೆನಪಿಸಲಿಕ್ಕಾಗಿ ಇಂತಹ ಅಭಿಯಾನಗಳನ್ನು ಯುನಿವೆಫ್ ಹಮ್ಮಿಕೊಂಡಿದೆ" ಎಂದು ಹೇಳಿದರು.
ಕುದ್ರೋಳಿ ಶಾಖೆಯ ಅಧ್ಯಕ್ಷ ಮುಹಮ್ಮದ್ ಸೈಫುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಜುನೈದ್ ಕಿರಅತ್ ಪಠಿಸಿದರು. ಮುಹಮ್ಮದ್ ಆಸಿಫ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಅಭಿಯಾನ ಸಂಚಾಲಕ ಯು. ಕೆ. ಖಾಲಿದ್ ಹಾಗೂ ಕುದ್ರೋಳಿ ಶಾಖೆಯ ಹಿರಿಯ ಸದಸ್ಯ ಅಬ್ದುರ್‍ರಶೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಭಿಯಾನ ಪ್ರಯುಕ್ತ ಕುದ್ರೋಳಿಯಲ್ಲಿ ನಡೆದ ಮಕ್ಕಳ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವೂ ಜರಗಿತು.







