ಗಂಜಿಮಠ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಅವರಿಗೆ ಸನ್ಮಾನ, ಅಭಿನಂದನಾ ಸಮಾರಂಭ

ಮಂಗಳೂರು: ಮರ್ಹೂಮ್ ಹಾಜಿ ಬಿ. ಶೇಕುಂಞಿ ಚಾರಿಟೇಬಲ್ ಟ್ರಸ್ಟ್ ಜೋಕಟ್ಟೆ ಹಾಗೂ ಝರಾ ಫ್ಯಾಮಿಲಿ ಟ್ರಸ್ಟ್ ಮಂಗಳೂರು ಇದರ ಸಹಯೋಗದಲ್ಲಿ 2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಅವರಿಗೆ ಗೌರವ ಸನ್ಮಾನ, ಅಭಿನಂದನಾ ಸಮಾರಂಭ ಹಾಗೂ ಸೇವಾ ಚೆಕ್ ಹಸ್ತಾಂತರ ಕಾರ್ಯಕ್ರಮವು ಮಂಗಳವಾರ ಗಂಜಿಮಠದ ಝರಾ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ವಿದೇಶದಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿ ಅವರಿಗೆ ಜೀವನ ನಡೆಸಲು ಅವಕಾಶ ಕಲ್ಪಿಸುತ್ತಿರುವುದು ದೊಡ್ಡ ವಿಚಾರ. ಇದೇ ರೀತಿ ಸಮಾಜ ಸೇವೆ ಮುಂದುವರಿದು ಇನ್ನಷ್ಟು ಜನರಿಗೆ ತಲುಪಲಿ ಎಂದು ಶುಭಹಾರೈಸಿದರು. ಮಂಗಳೂರು ನಗರದಲ್ಲಿ ನಡೆಯುತ್ತಿರುವ ಸೌಹಾರ್ದಯುತ ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಇದೇ ಸಂದರ್ಭ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಅವರನ್ನು ಗಣ್ಯರು ಸನ್ಮಾನಿಸಿ, ಗೌರವಿಸುವ ಮೂಲಕ ಅಭಿನಂದಿಸಿದರು.
ಬಳಿಕ ಮಾತನಾಡಿದ ಝಕರಿಯ ಅವರು, ನಾನು ನಡೆದು ಬಂದ ಕಷ್ಟದ ದಾರಿಯನ್ನು ಇಂದಿಗೂ ನೆನೆಯುತ್ತೇನೆ. ಹಾಗಾಗಿಯೇ ನನಗೆ ಬಡವರ ಮೇಲೆ ಅತಿಯಾದ ಅಕ್ಕರೆ. ನನ್ನ ಬೆಳವಣಿಗೆಯಲ್ಲಿ ಶ್ರಮಿಸಿರುವ ಕುಟುಂಬಿಕರು, ಊರಿನ ಹಿರಿಯರು, ಸ್ನೇಹಿತರು ಹಿತೈಷಿಗಳ ಸಹಕಾರ ಅವಿಸ್ಮರಣೀಯ. ಇದು ನನ್ನ ಕೊನೆಯವರೆಗೂ ನೆನಪಿನಲ್ಲಿಡು ವಿಚಾರ ಎಂದರು. ಕರ್ನಾಟಕ ರಾಜ್ಯೋತ್ಸ ಪ್ರಶಸ್ತಿ ನೀಡಿ ಗೌರವಿಸಿದ ಕರ್ನಾಟಕ ಸರಕಾರಕ್ಕೆ ಧನ್ಯವಾದ ಸಮರ್ಪಿಸಿದರು.
ಸೇವಾ ಚೆಕ್ ಸ್ವೀಕರಿಸಿ ಮಾತನಾಡಿದ ತಲಪಾಡಿ ಸ್ನೇಹಾಲಯ ವ್ಯಸನ ವಿಮೋಚನಾ ಕೇಂದ್ರದ ಜೋಸೆಫ್ ಕ್ರಾಸ್ತ ಅವರು, ಝಕರಿಯ ಜೋಕಟ್ಟೆ ಅವರ ಸಾಮಾಜಿಕ ಕಳಕಳಿಯ ಸಮಾಜಿಕ ಸೇವೆ ಎಲ್ಲರಿಗೂ ಮಾದರಿ. ಅವರು ಸಮಾಜದ ಕಡುಬಡವರು, ಸಹಾಯಕ್ಕೆ ಅರ್ಹರನ್ನು ಗುರುತಿಸಿ ಸಹಾಯದ ಹಸ್ತ ಚಾಚುತ್ತಿದ್ದಾರೆ. ಇದು ಅವರು ಆರ್ಥಿಕವಾಗಿ ಮಾತ್ರವಲ್ಲದೆ ಮನಸ್ಸಿನಲ್ಲೂ ಶ್ರೀಮಂತರು ಎಂಬದನ್ನು ಸಾರಿ ಹೇಳುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರ- ಅಂತರ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಹುಡುಕಿ ಬರಲಿ ಎಂದು ಶುಭಹಾರೈಸಿದರು.
ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಡಾ. ಯು.ಟಿ. ಖಾದರ್ ಫರೀದ್, ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ಯೇನಪೋಯ ಡೀಮ್ಡ್ ಯುನಿವರ್ಸಿಟಿಯ ಕುಲಾಧಿಪತಿ ಡಾ. ವೈ. ಅಬ್ದುಲ್ಲ ಕುಂಞಿ, ತಲಪಾಡಿ ಸ್ನೇಹಾಲಯ ಪುನರ್ವಸತಿ ಕೇಂದ್ರದ ಸ್ಥಾಪಕರಾದ ಜೋಸೆಫ್ ಕ್ರಾಸ್ತಾ, ಝಕರಿಯಾ ಜೋಕಟ್ಟೆ ಅವರ ಪತ್ನಿ ಹಾಝರ, ಮಕ್ಕಳಾದ ಝಹೀರ್ , ಝಾಹಿದ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಝಕರಿಯಾ ಜೋಕಟ್ಟೆ ಅವರು ಕರ್ನಾಟಕ ರಾಜ್ಯೋತ್ಸವ ಸಂದರ್ಭ ಪಡೆದಿದ್ದ 5ಲಕ್ಷ ರೂ. ನಗದು ಪುರಸ್ಕಾರವನ್ನು ಸಮಾಜಮುಖಿ ಸಂಸ್ಥೆಗಳಾದ ಸಾನಿಧ್ಯ ವಿಕಲಚೇತನರ ವಸತಿ ಶಾಲೆ ಶಕ್ತಿನಗರ, ಸ್ನೇಹಾಲಯ ವ್ಯಸನ ವಿಮೋಚನಾ ಕೇಂದ್ರ ತಲಪಾಡಿ, ಸ್ನೇಹದೀಪ ಎಚ್ಐವಿ ಮಕ್ಕಳ ಆಶ್ರಮ ಬೋಂದೆಲ್, ಎಂ.ಫ್ರೆಂಡ್ಸ್ ಲೇಡಿಗೋಶನ್ ಕಾರುಣ್ಯ ಯೋಜನೆ, ಹಿದಾಯ ಕಾಲನಿ ವಿಶೇಷ ಮಕ್ಕಳ ಕೇಂದ್ರ ಕಾವಳಕಟ್ಟೆ ಇವರಿಗೆ ಹಸ್ತಾಂತರಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಸಾನಿಧ್ಯ ವಿಕಲಚೇತನರ ವಸತಿ ಶಾಲೆ ಶಕ್ತಿನಗರ ಇದರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಫೀಕ್ ಮಾಸ್ಟರ್ ಸ್ವಾಗತಿಸಿದರು. ಪತ್ರಕರ್ತ ಚೇತನ್ ಕಾರ್ಯಕ್ರಮ ನಿರೂಪಿಸಿದರು.







