ಮಂಗಳೂರು | ಇಂದಿನಿಂದ ಕೋಸ್ಟಲ್ ಫ್ರೆಂಡ್ಸ್ ಕ್ರಿಕೆಟ್ ಕಾರ್ನಿವಲ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು(ರಿ) ಆಯೋಜಿಸಿರುವ "ಜಾಕ್ ಕ್ರಿಕೆಟ್ ಕಾರ್ನಿವಲ್- ಸೀಸನ್ 6" ಇಂದು ಮತ್ತು ನಾಳೆ (ಡಿ.24 ಮತ್ತು 25) ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈ ಬಾರಿ ಎರಡು ದಿನಗಳ ಕಾಲ ಹೊನಲು ಬೆಳಕಿನ ಅದ್ದೂರಿ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದೆ.
ಇಂದು ಸಂಜೆ 7 ಗಂಟೆಗೆ ಪಂದ್ಯಾಕೂಟದ ಉದ್ಘಾಟನೆ ನಡೆಯಲಿದೆ. ಸ್ಪೀಕರ್ ಯು.ಟಿ ಖಾದರ್, ವಿಧಾನ ಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸೌದಿ ಅರೇಬಿಯಾದ ಜಾಕ್ ಜನರೇಷನ್ ಕಂಪೆನಿ ಸಿಇಒ ಶಬೀರ್, ದುಬೈನ ಉಗ್ಗೂಸ್ ಗ್ರೂಪ್ ಕಂಪೆನಿ ಸಿಇಒ ಅಶ್ಫಾಕ್ ಹರ್ಷದ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ, ಎಕ್ಸ್‌ಪರ್ಟೈಸ್ ಕಂಪೆನಿ ನಿರ್ದೇಶಕ ಅಶ್ರಫ್ ಕರ್ನಿರೆ, ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ ಇಫ್ತಿಕಾರ್, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಮುಹಮ್ಮದ್ ಅಲಿ ಉಚ್ಚಿಲ್, ಟೀಂ ಬೀ ಹ್ಯೂಮನ್ ಸಂಸ್ಥಾಪಕ ಆಸಿಫ್ ಅಹ್ಮದ್, ಕಂಕನಾಡಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಡಿ ನಾಗರಾಜ್, ಪಣಂಬೂರು ಠಾಣಾ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.
ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಘಟನೆಯ ಸದಸ್ಯರ ನಾಲ್ಕು ತಂಡಗಳು ಟ್ರೋಫಿಗಾಗಿ ಕಾದಾಟ ನಡೆಸಲಿದೆ. ರಾಯಲ್ ಹಂಟರ್ಸ್, ಸಿಲ್ವರ್ ಸ್ಟ್ರೈಕರ್ಸ್, ಕೋಸ್ಟಲ್ ಕಿಂಗ್ಸ್ ಮತ್ತು ಎಫ್.ಎನ್ ಬ್ರದರ್ಸ್ ತಂಡಗಳು ರೂಪುಗೊಂಡಿದ್ದು, ಇಂದು ಮತ್ತು ನಾಳೆ ಲೀಗ್ ಮತ್ತು ಕ್ವಾಲಿಫೈರ್ ಪಂದ್ಯಗಳು ನಡೆದು ನಾಳೆ ರಾತ್ರಿ 10 ಗಂಟೆಗೆ ಫೈನಲ್ ಹಣಾಹಣಿ ನಡೆಯಲಿದೆ.
ಸೌದಿ ಅರೇಬಿಯಾದ ಜುಬೈಲ್‌ನಲ್ಲಿರುವ ಜಾಕ್ ಜನರೇಷನ್ ಕಂಪೆನಿ ಪಂದ್ಯಾಕೂಟಕ್ಜೆ ಪ್ರಧಾನ ಪ್ರಯೋಕತ್ವ ನೀಡಿದ್ದು, ದುಬೈನ ಉಗ್ಗೂಸ್ ಗ್ರೂಪ್ ಆಫ್ ಕಂಪೆನಿ ಡೈಮಂಡ್ ಪ್ರಯೋಜಕತ್ವ ನೀಡಿದೆ. ಮಂಗಳೂರು ಮತ್ತು ಕೊಲ್ಲಿ ರಾಷ್ಟ್ರದ ಹಲವು ಕಂಪೆನಿಗಳ ಪ್ರಯೋಜಕತ್ವದಲ್ಲಿ ಈ ಪಂದ್ಯಾಕೂಟ ಆಯೋಜನೆಗೊಂಡಿದೆ.
ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಘಟನೆಯು ಸಾಮಾಜಿಕ ಮತ್ತು ಮಾನವೀಯ ಸೇವೆಗಳಲ್ಲಿ ಸಕ್ರಿಯವಾಗಿದ್ದು, ಇವರು ವರ್ಷಂಪ್ರತಿ ನಡೆಸುವ ಸಾಂತ್ವನದ ಸಂಚಾರ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಕೆಲ ದಿನಗಳ ಹಿಂದೆ ವಿಶೇಷ ಚೇತನ ಮಕ್ಕಳ ಜೊತೆ ಸಾಂತ್ವನದ ಸಂಚಾರ 3.O ಕಾರ್ಯಕ್ರಮ ನೆರವೇರಿತ್ತು.







