ಮಂಗಳೂರಿನಲ್ಲಿ ಪವಿತ್ರ ಪರಮ ಪ್ರಸಾದದ ಮೆರವಣಿಗೆ

ಮಂಗಳೂರು, ಜ.4: ಯೇಸು ಕ್ರಿಸ್ತರ ದೈವದರ್ಶನ ಮಹೋತ್ಸವ (ಎಪಿಫನಿ) ಪ್ರಯುಕ್ತ ಮಂಗಳೂರು ಧರ್ಮಪ್ರಾಂತದ ವತಿಯಿಂದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯು ರವಿವಾರ ಮಿಲಾಗ್ರಿಸ್ ಚರ್ಚ್‌ನಿಂದ ರೊಸಾರಿಯೊ ಕೆಥೆಡ್ರಲ್‌ವರೆಗೆ ನಡೆಯಿತು.
ಪ್ರವಚನ ನೀಡಿದ ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಪರಮ ಪವಿತ್ರ ಪ್ರಸಾದದಲ್ಲಿ ನಾವು ಜಗತ್ತಿನ ಜ್ಯೋತಿಯಾಗಲು ಶಕ್ತಿಯನ್ನು ಪಡೆಯುತ್ತೇವೆ. ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಕ್ರಿಸ್ತನ ಪ್ರೀತಿಯನ್ನು ಪ್ರತಿಬಿಂಬಿಸಲು ನಮಗೆ ಪ್ರೇರಣೆ ಸಿಗುತ್ತದೆ ಎಂದರು.
*ಬಲಿಪೂಜೆಯ ಬಳಿಕ ಪವಿತ್ರ ಪ್ರಸಾದವನ್ನು ಹೊತ್ತ ಅಲಂಕೃತ ವಾಹನ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಹಂಪನಕಟ್ಟೆ, ಕ್ಲಾಕ್ ಟವರ್ ವೃತ್ತ, ಎ.ಬಿ. ಶೆಟ್ಟಿ ವೃತ್ತ, ನೆಹರೂ ವೃತ್ತದ ಮೂಲಕ ಸಾಗಿದ ಮೆರವಣಿಗೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.
*ರೊಸಾರಿಯೊ ಕೆಥೆಡ್ರಲ್ ಆವರಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ಫಾ.ಅಬ್ರಹಾಂ ಡಿಸೋಜ ದೇವರ ಪ್ರೀತಿಯು ಕೇವಲ ಪ್ರಾರ್ಥನೆಗೆ ಸೀಮಿತವಾಗಿರಬಾರದು. ಅದು ಬಡವರ, ನಿರ್ಗತಿಕರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಯಲ್ಲಿ ವ್ಯಕ್ತವಾಗಬೇಕು. ದೇವರನ್ನು ಪ್ರೀತಿಸುವುದೆಂದರೆ ಬಡವರಲ್ಲಿ ಕ್ರಿಸ್ತನನ್ನು ಕಾಣುವುದು ಮತ್ತು ನಮ್ಮ ಕಾರ್ಯಗಳ ಮೂಲಕ ಅವರಿಗೆ ಸೇವೆ ಸಲ್ಲಿಸುವುದಾಗಿದೆ ಎಂದರು.
*2026ರ ಮಕ್ಕಳ ವರ್ಷ ಘೋಷಣೆ: ಪವಿತ್ರ ಪ್ರಸಾದದ ಆಶೀರ್ವಾದದ ನಂತರ, ಬಿಷಪ್ ನಮ್ಮ ಮಕ್ಕಳು ದೇವರ ರಾಜ್ಯದ ಫಲಗಳು ಎಂಬ ಧ್ಯೇಯವಾಕ್ಯವಿರುವ ಸ್ಮರಣಾರ್ಥ ಲಾಂಛನವನ್ನು ಅನಾವರಣಗೊಳಿಸುವ ಮೂಲಕ, 2026ನೇ ವರ್ಷವನ್ನು ಅಧಿಕೃತವಾಗಿ ‘ಮಕ್ಕಳ ವರ್ಷ’ ಎಂದು ಘೋಷಿಸಿದರು.
ಬಳಿಕ ಮಾತನಾಡಿದ ಬಿಷಪ್, 18 ವರ್ಷದೊಳಗಿನ ಮಕ್ಕಳ ಕ್ಷೇಮಕ್ಕೆ ವಿಶೇಷ ಆದ್ಯತೆ ನೀಡಬೇಕು. ಅವರಿಗೆ ಕೇವಲ ಶಿಕ್ಷಣವಷ್ಟೇ ಅಲ್ಲ ಮಾನವೀಯ ಮೌಲ್ಯಗಳು, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಬಗ್ಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.
ರೊಸಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಆರಾಧನೆ ಮತ್ತು ಪ್ರಾರ್ಥನಾ ವಿಧಿಯನ್ನು ಬೈಬಲ್ ಆಯೋಗದ ಕಾರ್ಯದರ್ಶಿ ಡಾ. ವಿನ್ಸೆಂಟ್ ಸಿಕ್ವೇರಾ ನಡೆಸಿಕೊಟ್ಟರು. ಸಮಾರೋಪ ಕಾರ್ಯಕ್ರಮವನ್ನು ಮಂಗಳ ಜ್ಯೋತಿ ಲಿಟರ್ಜಿಕಲ್ ಸೆಂಟರ್‌ನ ನಿರ್ದೇಶಕ ಫಾ.ರೋಹಿತ್ ಡಿಕೋಸ್ಟಾ ಸಂಘಟಿಸಿದರು.







