ರಾಜಕಾರಣಿಗಳ ಮೇಲಿನ ಭಕ್ತಿ ಸಂವಿಧಾನಕ್ಕೆ ಅಪಾಯ: ಕ್ಲಿಪ್ಟನ್ ಡಿ’ ರೊಜಾರಿಯೋ

ಬಂಟ್ವಾಳ: ರಾಜಕೀಯ ನಾಯಕರನ್ನು ಹೀರೋಗಳಂತೆ ಭಕ್ತಿಯಿಂದ ನೋಡಬಾರದು. ಅಂಥ ಅಂಧಭಕ್ತಿ ಸಂವಿಧಾನಕ್ಕೆ ದೊಡ್ಡ ಸವಾಲಾಗುತ್ತದೆ ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್ಎಜೆ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಹೈಕೋರ್ಟ್ ವಕೀಲ ಕ್ಲಿಪ್ಟನ್ ಡಿ’ ರೊಜಾರಿಯೋ ಎಚ್ಚರಿಸಿದರು.
ಎಐಎಲ್ಎಜೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಲೀಗಲ್ ಫ್ರೆಂಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬಿ.ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನದ ಮುಂದಿರುವ ಸವಾಲುಗಳು’ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಂದು ರಾಜಕೀಯ ನಾಯಕರನ್ನು ಹೀರೋಗಳಾಗಿ ಭಾರೀ ಭಕ್ತಿಯಿಂದ ಕಾಣುವ ಪ್ರವೃತ್ತಿ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಭಕ್ತರಾಗಿಬಿಟ್ಟರೆ ಪ್ರಭುತ್ವವನ್ನು ಪ್ರಶ್ನಿಸುವ ಶಕ್ತಿ ಕಳೆದುಕೊಳ್ಳಲಾಗುತ್ತದೆ. ಈ ಅಪಾಯವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು 1974ರಲ್ಲೇ ಎಚ್ಚರಿಸಿದ್ದರು. ಇದನ್ನು ನಾವು ಭಾರತ ಸಂವಿಧಾನಕ್ಕೆ ಎದುರಾಗಿರುವ ಭಾರೀ ಅಪಾಯವಾಗಿ ನೋಡಬೇಕು ಎಂದು ಹೇಳಿದರು.
ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಬಡತನ ಸಂವಿಧಾನದ ಆಶಯಗಳನ್ನು ಸಾಧಿಸಲು ಅಡ್ಡಿಯಾಗುತ್ತಿದೆ. ಬಡವರಿಗೆ ಇಂದು ಒಬ್ಬ ಜಾಗೃತ ನಾಗರಿಕನಾಗಿ ಚಿಂತಿಸುವ ಅವಕಾಶವೂ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಸಂವಿಧಾನದ ಆಶಯಗಳನ್ನು ಮನದಟ್ಟು ಮಾಡಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
“ಇಂದು ಯುವಕರು ಧರ್ಮದ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಆ ಗೋಡೆಗಳನ್ನು ಒಡೆಯಬೇಕಾಗಿದೆ. ಆಗ ಮಾತ್ರ ಸಂವಿಧಾನಕ್ಕೆ ಪೂರಕವಾದ ಬದುಕು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಸಂವಿಧಾನವನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದಕ್ಕೆ ತಕ್ಕ ಶಿಕ್ಷಣ ವ್ಯವಸ್ಥೆ ಸಮಾಜದಲ್ಲಿ ರೂಪುಗೊಳ್ಳಬೇಕು. ಬಡವ–ಶ್ರೀಮಂತ ಭೇದ, ಜಾತಿ ಶೋಷಣೆ, ಧರ್ಮ ಹಾಗೂ ಲಿಂಗ ಆಧಾರಿತ ತಾರತಮ್ಯವಿಲ್ಲದ ಸಮಾಜವನ್ನು ನಿರ್ಮಿಸುವುದು ಇಂದಿನ ಹಿರಿಯರು ಮುಂದಿನ ಪೀಳಿಗೆಗೆ ನೀಡಬಹುದಾದ ಮಹತ್ವದ ಕೊಡುಗೆ ಎಂದು ಹೇಳಿದರು.
ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ದೇಶದ ಪ್ರಜಾಪ್ರಭುತ್ವ ‘ತುರ್ತು ಪರಿಸ್ಥಿತಿ’ ಎಂಬ ಕರಾಳ ದಿನಗಳನ್ನು ಕಂಡಿತ್ತು. ಆ ಸಂದರ್ಭದಲ್ಲಿ ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಲು ಪ್ರಯತ್ನ ನಡೆದರೂ, ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟುಮಾಡುವ ತಿದ್ದುಪಡಿ ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ಇದರಿಂದ ಸಂವಿಧಾನ ಉಳಿದುಕೊಂಡಿತು ಎಂದು ಕ್ಲಿಪ್ಟನ್ ಡಿ’ ರೊಜಾರಿಯೋ ಹೇಳಿದರು.
ಹಿರಿಯ ವಕೀಲ ಮನೋರಾಜ್ ರಾಜೀವ್ ಅವರು ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಜನತೆ ಹೇಗೆ ಎದುರಿಸಬೇಕು ಎಂಬುದನ್ನು ವಿವರಿಸಿದರು. ಎಐಎಲ್ಎಜೆ ಕೇಂದ್ರ ಸಮಿತಿ ಸದಸ್ಯೆ ಅವನಿ ಚೋಕ್ಷಿ, ಯುವ ವಕೀಲ ಅಬ್ದುಲ್ ಜಲೀಲ್ ಎನ್., ಹೈಕೋರ್ಟ್ ವಕೀಲೆ ಸಂದ್ಯಾ ಪ್ರಭು ಮಾತನಾಡಿದರು.
ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಅಶ್ವಿನಿ ಕುಮಾರ್ ರೈ ಹಾಗೂ ಸುರೇಶ್ ಪೂಜಾರಿ, ಹಿರಿಯ ವಕೀಲರಾದ ಶೋಭಲತಾ ಸುವರ್ಣ, ಹಾತಿಮ್ ಅಹಮದ್, ಶ್ರೀಧರ್ ಪೈ, ಯುವ ವಕೀಲರಾದ ಮೋಹನ್ ಕುಮಾರ್ ಕಡೇಶಿವಾಲ್ಯ, ಉಮಾಕರ್ ಬಂಗೇರ, ಎಐಎಲ್ಎಜೆ ಉಪಾಧ್ಯಕ್ಷ ಮಂಜುನಾಥ್ ಪೂಜಾರಿ, ನವೀನ್ ತಾವ್ರೋ, ಲೀಗಲ್ ಫ್ರೆಂಡ್ಸ್ ಜಿಲ್ಲಾ ಘಟಕದ ಮುಖಂಡ ಉಮ್ಮರುಲ್ ಫಾರೂಕ್ ನೆಲ್ಯಾಡಿ, ಸಿರಾಜುದ್ದೀನ್ ಉಪ್ಪಿನಂಗಡಿ, ಎಸ್.ಜಿ. ಅಫ್ರೀಝ್, ಮಹಮ್ಮದ್ ಲುಕ್ಮಾನ್, ಕಾರ್ತಿಕ್ ಎಂ., ಪ್ರಜ್ವಲ್ ಪುತ್ತೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಐಎಲ್ಎಜೆ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಸ್ಫಾಕ್ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ತುಳಸೀದಾಸ್ ಆರ್. ವಂದಿಸಿದರು. ಯುವ ಮುಖಂಡ ಸತೀಶ್ ಅರಳ ಸಂವಿಧಾನದ ಪೀಠಿಕೆಯನ್ನು ಹಾಡಿದರು. ವಕೀಲರಾದ ಚಂದ್ರಶೇಖರ್ ರಾವ್ ಪುಂಚಮೆ ಹಾಗೂ ಮಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು.







