ಕಿನ್ಯ ಒಲವಿನ ಹಳ್ಳಿಯ ನಿರಾಶ್ರಿತರೊಂದಿಗೆ 'ನಮ್ಮವರ ಜೊತೆ ಒಂದು ದಿನ' ಕಾರ್ಯಕ್ರಮ

ಉಳ್ಳಾಲ, ಜ.13: ಕಿನ್ಯದ ಒಲವಿನಹಳ್ಳಿ ಪುನರ್ವಸತಿ ಹಾಗೂ ಸಮುದಾಯದ ಕೇಂದ್ರದಲ್ಲಿ ಉಳ್ಳಾಲ ಮುಕ್ಕಚ್ಚೇರಿಯ ರಾಯಲ್ ಫೌಂಡೇಶನ್ ವತಿಯಿಂದ ನಿರಾಶ್ರಿತರೊಂದಿಗೆ 'ನಮ್ಮವರ ಜೊತೆ ಒಂದು ದಿನ' ವಿಶೇಷ ಕಾರ್ಯಕ್ರಮವು ರವಿವಾರ ನಡೆಯಿತು.
ರಾಯಲ್ ಫೌಂಡೇಶನ್ ನ ನೂತನ ಕಚೇರಿಯ ಉದ್ಘಾಟನೆಯ ಭಾಗವಾಗಿ ನಡೆದ ಈ ವಿಶೇಷ ಸಮಾಜ ಸೇವಾ ಮತ್ತು ಸಹವಾಸ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ನಿರಾಶ್ರಿತ ವೃದ್ಧರು ಮತ್ತು ವಿಶೇಷಚೇತನರು ಪಾಲ್ಗೊಂಡಿದ್ದರು.
ಒಲವಿನಹಳ್ಳಿ ರಿಹ್ಯಾಬಿಲಿಟೇಶನ್ ಸೆಂಟರ್ ನಿರ್ವಾಹಕಿ ಸಿಸ್ಟರ್ ಐಲಿನ್ ಮಥಾಯಸ್ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿಯ ಇಮಾಮ್ ಕಬೀರ್ ಸಅದಿ ದುಆಗೈದರು. ಮುಖ್ಯ ಅತಿಥಿಯಾಗಿ ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ಇಬ್ರಾಹಿಂ ಖಲೀಲ್ ಭಾಗವಹಿಸಿದ್ದರು.
ಫೌಂಡೇಶನ್ ಅಧ್ಯಕ್ಷ ತೌಸೀಫ್ ಅಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ನಾಗರಿಕರಿಗಾಗಿ ವಿಶೇಷ ಭೋಜನ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮನೋರಂಜನೆಗಾಗಿ ಆಟ-ಸ್ಪರ್ಧೆ, ಗಾಯನ ಮತ್ತು ಕುಣಿತಗಳನ್ನು ಏರ್ಪಡಿಸಲಾಗಿತ್ತು. ಸೆಂಟರ್ ನ ಹಿರಿಯ ಸಿಸ್ಟರ್ ಗಳು ಸಹ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ನವಾಝ್, ಉಪಾಧ್ಯಕ್ಷ ಮನ್ಸೂರ್ ಮುಕ್ಕಚ್ಚೇರಿ, ಕಾನೂನು ಸಲಹೆಗಾರ ಜಲಾಲುದ್ದೀನ್ ಉಪಸ್ಥಿತರಿದ್ದರು.
ಮಂಗಳೂರ ರಿಯಾಝ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಕುಂಪಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಮನ್ಸೂರ್ ಮಂಚಿಲ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಝಿಯಾದ್ ಮುಕ್ಕಚ್ಚೇರಿ ಪಾಲ್ಗೊಂಡಿದ್ದರು.







