ಸುರಕ್ಷಿತ ಸಾರಿಗೆಗೆ ದ.ಕ. ಜಿಲ್ಲೆಯಲ್ಲಿ ಸಂಚಾರದ ಅಡಚಣೆ ನಿವಾರಿಸಲು ಬಸ್ ಮಾಲಕರ ಸಂಘ ಆಗ್ರಹ

ಮಂಗಳೂರು, ಜ.21: ದ.ಕ. ಜಿಲ್ಲೆಯಲ್ಲಿ ಸುರಕ್ಷಿತ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತೆ ಸಂಚಾರದ ಅಡಚಣೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ದ.ಕ. ಬಸ್ಸು ಮಾಲಕರ ಸಂಘ ಒತ್ತಾಯಿಸಿದೆ.
ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ಮಂಗಳೂರು ನಗರದಲ್ಲಿ ಸದ್ಯ ಕೆಲವು ರಸ್ತೆಗಳು ಅಗಲಗೊಂಡಿದ್ದರೂ ರಸ್ತೆಯ ಎರಡೂ ಬದಿಗಳಲ್ಲಿ ಕಾರುಗಳು. ರಿಕ್ಷಾಗಳು ಸೇರಿದಂತೆ ಲಘು ವಾಹನಗಳು ಪಾರ್ಕಿಂಗ್ ಮಾಡುವುದರಿಂದ ಬಸ್ ಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ. ಜೊತೆಗೆ ರಸ್ತೆಗಳನ್ನು ಅಗೆದು ಹಲವು ದಿನಗಳ ಕಾಲ ಹಾಗೆಯೇ ಬಿಟ್ಟಿರುತ್ತಾರೆ. ಇದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗುತ್ತಿದೆ. ಹಾಗೂ ಅಲ್ಲಲ್ಲಿ ನಡೆಯುತ್ತಿರುವ ಭೂಗತ ಕೇಬಲ್ಗಳ ಅಳವಡಿಕೆ, ದೂರ ಸಂಪರ್ಕ ಹಾಗೂ ನೀರಿನ ಸಂಪರ್ಕದ ಕಾಮಗಾರಿಗಳನ್ನು ನಡೆಯುವುದರಿಂದ ಶೀಘ್ರ ಮುಗಿಸದಿರುವುದರಿಂದ ಸಂಚಾರಕ್ಕೆ ತುಂಬಾ ತೊಂದರೆಯಾಗಿರುತ್ತದೆ ಎಂದು ಹೇಳಿದರು.
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು ಇಲ್ಲಿ ಸಮರ್ಪಕ ಸರ್ವೀಸ್ ರಸ್ತೆ ಮಾಡದೆ ಇರುವುದರಿಂದ ಅನೇಕ ಸಮಸ್ಯೆಗಳು ಈ ಸಂಚಾರ ದಟ್ಟಣೆಗೆ ಕಾರಣವಾಗಿರುತ್ತದೆ. ಅಲ್ಲದೆ, ಲಾರಿ, ಬುಲೆಟ್ ಟ್ಯಾಂಕರುಗಳೆಲ್ಲ ಹೆದ್ದಾರಿಯಲ್ಲಿ ಬದಿಯಲ್ಲೇ ನಿಲ್ಲುವುದರಿಂದಲೂ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ನಗರದಲ್ಲಿ ಹೆಚ್ಚಿನ ಕಡೆ ಬಸ್ ಬೇ ಗಳು ಇಲ್ಲ. ಮಳೆಗಾಲದಲ್ಲಿ ಮಳೆ ನೀರುಗಳು ಸರಿಯಾಗಿ ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುವುದರಿಂದ ವಾಹನಗಳು ತಾಂತ್ರಿಕ ತೊಂದರೆಗೆ ಸಿಲುಕಿ ಕಷ್ಟನಷ್ಟಗಳು ಉಂಟಾಗುತ್ತದೆ ಎಂದವರು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಅದರಲ್ಲೂ ಕೆ.ಎಸ್.ರಾವ್ ರಸ್ತೆ, ಬಂಟ್ಸ್ ಹಾಸ್ಟೆಲ್, ಬಲ್ಮಠದಿಂದ ಕಂಕನಾಡಿ ಕರಾವಳಿ ಸರ್ಕಲ್ ತನಕ ಅಲ್ಲಿಂದ ಪಂಪ್ಲ್ ತನಕ ವಿಪರೀತ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಇದಕ್ಕೆ ಪ್ರಮುಖ ಕಾರಣ ರಸ್ತೆಯ ಎರಡೂ ಬದಿಯಲ್ಲಿ ಲಘು ವಾಹನಗಳ ಪಾರ್ಕಿಂಗ್ ಮುಖ್ಯ ಕಾರಣ. ಅಲ್ಲದೇ ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಎಂ.ಜಿ.ರೋಡ್, ಕೆಎಸ್ಸಾರ್ಟಿಸಿ, ನಂತೂರು, ಕೆಪಿಟಿಯಿಂದ ಪದುವ ಸ್ಕೂಲ್ ತುಂಬಾ ಸಂಚಾರ ದಟ್ಟಣೆಯಾಗಿರುತ್ತದೆ. ಹಾಗೂ ಫಳ್ನೀರ್ನಿಂದ ಕಂಕನಾಡಿ ತನಕ ಎರಡು ಕಡೆ ರಸ್ತೆಗಳಲ್ಲಿ ಕಾರುಗಳು ಪಾರ್ಕಿಂಗ್ ಮಾಡಿರುವುದರಿಂದ ಹಲವು ತಾಸುಗಳ ವರೆಗೆ ಸಂಚಾರ ಅಸ್ತವ್ಯಸ್ತವಾಗಿರುತ್ತವೆ. ಕುಂಟಿಕಾನ, ಕೊಟ್ಟಾರ ಚೌಕಿ, ಕೂಳೂರು ಹಳೆ ಸೇತುವೆಯಲ್ಲೂ ವಿಪರೀತ ವಾಹನಗಳ ದಟ್ಟಣೆ ಇರುವುದರಿಂದ ವಾಹನ ಸಂಚಾರ ವ್ಯವಸ್ಥೆ ಬಹಳ ಕಷ್ಟಕರವಾಗಿದೆ. ನಗರದ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತಳ್ಳುಗಾಡಿ ವ್ಯಾಪಾರ ಮಾಡುವುದರಿಂದ ಅದನ್ನು ತೆಗೆದು ಕೊಳ್ಳಲು ಬರುವ ಗ್ರಾಹಕರು ತಮ್ಮ ವಾಹನವನ್ನು ರಸ್ತೆಯ ಬದಿಯಲ್ಲೇ ನಿಲ್ಲಿಸುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಗೂಡ್ಸ್ ಟೆಂಪೋಗಳು ವಿಪರೀತ ಉದ್ದುದ್ದ ಪೈಪುಗಳನ್ನು, ಸರಳುಗಳನ್ನು ಹಾಕಿಕೊಂಡು ಅಪಾಯಕಾರಿಯಾಗಿ ಬರುವುದು ಸುರಕ್ಷಿತ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗಿದೆ. ಆದುದರಿಂದ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಜನರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಖಾಸಗಿ ಸುಗಮ ಸೇವೆಯನ್ನು ನೀಡಲು ಅನುವು ಮಾಡಿ ಮುಂದುವರಿಸಿಕೊಂಡು ಹೋಗಲು ಸಹಕಾರಕ್ಕೆ ನೀಡ ಬೇಕೆಂದು ಜಿಲ್ಲಾಡಳಿತ, ಸರಕಾರಕ್ಕೆ ಮನವಿ ಮಾಡುವುದಾಗಿ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾರಿಗೆ ಸಂಚಾರ ಇಲ್ಲದ ಕಡೆ ಸರಕಾರಿ ನಿಗಮದ ಬಸ್ ಸಂಚಾರ ಆರಂಭಿಸಿ, ಖಾಸಗಿ ಬಸ್ಸು ಸಂಚಾರ ವ್ಯವಸ್ಥೆ ಉತ್ತಮವಾಗಿ ಇರುವ ಕಡೆ ಸರಕಾರಿ ನಿಗಮದ ಸ್ಪರ್ಧೆ ಅನಗತ್ಯ. ಖಾಸಗಿ ಬಸ್ ಗಳ ಸಂಚಾರ ಸೇವೆ ಉತ್ತಮವಾಗಿ ಇರುವ ಕಡೆ ಸರಕಾರಿ ನಿಗಮದ ಬಸ್ ಹಾಕಿ ಓಡಿಸಿದಾಗ ಖಾಸಗಿ ಬಸ್ ಮಾಲಕರು ನಷ್ಟ ಅನುಭವಿಸಿ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಈ ರೀತಿಯ ಸ್ಪರ್ಧೆ ಯನ್ನು ಕೈ ಬಿಡಬೇಕೆಂದು ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಉಪಾಧ್ಯಕ್ಷ ಕೆ. ರಾಮಚಂದ್ರ ನಾಯ್ಕ್,ಕಾರ್ಯದರ್ಶಿ ರಾಜೇಶ್ ಟಿ. ಉಪಸ್ಥಿತರಿದ್ದರು.







