ಕುದ್ಮುಲ್ ರಂಗರಾವ್ ಸಮಾಧಿ ಸ್ಥಳ ಅಭಿವೃದ್ಧಿ : ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್‌ರಂಗರಾವ್‌ಅವರ ಸಮಾಧಿ ಸ್ಥಳದ ಪರಿಸರ ಅಭಿವೃದ್ಧಿಗೆ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ಶನಿವಾರ ಕುದ್ಮುಲ್ ರಂಗರಾವ್‌ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದರು.
ಅಂದಿನ ಕಾಲದಲ್ಲಿ ಸಮಾಜದಅತ್ಯಂತ ತಳಸ್ತರದಲ್ಲಿದ್ದ ಸಮಾಜದ ಏಳಿಗೆಗಾಗಿ ನಿಷ್ಕಳಂಕವಾಗಿ ಸೇವೆ ಸಲ್ಲಿಸಿದ ಕುದ್ಮುಲ್ ರಂಗರಾವ್‌ರಾಜ್ಯದ ಅದಮ್ಯ ಚೇತನ. ಯಾರ ವಿರೋಧವನ್ನು ಲೆಕ್ಕಿಸದೆ ಅವರು ದಲಿತರ ಶಿಕ್ಷಣ ಮತ್ತು ಸಾಮಾಜಿಕ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸಿದರು ಎಂದು ಸಚಿವರು ಹೇಳಿದರು.
ಅತ್ತಾವರದಲ್ಲಿರುವ ಕುದ್ಮುಲ್ ರಂಗರಾವ್ ಸಮಾಧಿ ಸ್ಥಳದ ಅಭಿವೃದ್ಧಿಗೆ ಅನುದಾನ ಈ ಹಿಂದೆಯೇ ಬಿಡುಗಡೆ ಯಾಗಿ, ಅರಣ್ಯ ಇಲಾಖೆ ತಕರಾರಿನಿಂದಾಗಿ ಅಭಿವೃದ್ಧಿಗೆ ತೊಡಕಾಗಿತ್ತು ಎಂದು ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಶೀಘ್ರವೇ ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ, ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವರನ್ನು ಭೇಟಿಯಾದ ವಿವಿಧ ದಲಿತ ಸಂಘಟನೆಗಳು, ಕುದ್ಮುಲ್ ಸಮಾಧಿ ಸ್ಥಳದ ಅಭಿವೃದ್ಧಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್‌ಡಿ ಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್‌ಕುಮಾರ್, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ, ಮುಖಂಡರಾದ ಪದ್ಮರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.







