ಜನಪದ ಕ್ರೀಡೆ ಕಂಬಳ ಜಾತ್ರೆಯಂತೆ ಪ್ರಸಿದ್ಧವಾಗುತ್ತಿದೆ: ನ್ಯಾ.ಅಬ್ದುಲ್ ನಝೀರ್

ಮೂಡುಬಿದಿರೆ: ತುಳುನಾಡಿನ ಜನಪದ ಕ್ರೀಡೆ ಕಂಬಳವು ಅಡೆತಡೆಗಳನ್ನು ಮೀರಿ ಜಾತ್ರೆಯಂತೆ ಪ್ರಸಿದ್ಧವಾಗುತ್ತಿದೆ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನ್ಯಾ.ಅಬ್ದುಲ್ ನಝೀರ್ ಹೇಳಿದರು.
ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಕಂಬಳಕ್ಕೆ ತಡೆಯಾಜ್ಞೆ ಬಂದು ತೊಂದರೆಯಾಗಿದ್ದರೂ ದೇವರ ದಯೆ ಹಾಗೂ ಕಂಬಳಾಭಿಮಾನಿಗಳ ಪ್ರಾರ್ಥನೆಯಿಂದ ಈ ಕ್ರೀಡೆಗಿದ್ದ ಅಡ್ಡಿ ನಿವಾರಣೆಯಾಗಿದೆ ಎಂದ ನ್ಯಾ.ಅಬ್ದುಲ್ ನಝೀರ್, ಕಾಂತಾರ ಸಿನೆಮಾದ ಬಳಿಕ ಕಂಬಳದ ಜನಪ್ರಿಯತೆ ವಿಶ್ವವ್ಯಾಪಿಯಾಗಿದೆ. ಜನ ತಮ್ಮ ದುಃಖಗಳನ್ನು ಮರೆತು ಕಂಬಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಮೊದಲು ವೇದಿಕೆಗೆ ಆಗಮಿಸಿದ ರಾಜ್ಯಪಾಲರು ಜನರತ್ತ ಕೈಬೀಸಿ ನಮಸ್ಕರಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಅವರು ರಾಜ್ಯಪಾಲರಿಗೆ ಕಂಬಳದ ಬೆತ್ತವನ್ನು ನೀಡಿ ಸ್ವಾಗತಿಸಿದರು.
ಸೇನಾ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿ ಎಡಿಜಿ ಬ್ರೂಸ್ ಫೆರ್ನಾಂಡಿಸ್, ಕಂಬಳದ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಪ್ರಮುಖರಾದ ರಂಜಿತ್ ಪೂಜಾರಿ, ಕೃಷ್ಣ ಜೆ. ಪಾಲೆಮಾರ್, ಹಿರಿಯ ನ್ಯಾಯವಾದಿ ಕೆ.ರ್ ಪಂಡಿತ್, ಕೆ.ಪಿ.ಜಗದೀಶ್ ಅಧಿಕಾರಿ, ಮೇಘನಾಥ ಶೆಟ್ಟಿ, ದಿನೇಶ್ ಪುತ್ರನ್, ಹರಿಪ್ರಸಾದ್, ರೋಹಣ್ ಅತಿಕಾರಿಬೆಟ್ಟು, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶೂನ್ಯ ತ್ಯಾಜ್ಯ ಕಂಬಳಕ್ಕಾಗಿ ಶ್ರಮಿಸಿದ ಕಮ್ಯುನಿಟಿ ಮೊಬಿಲೈಸರ್ ತಂಡವನ್ನು ಸನ್ಮಾನಿಸಲಾಯಿತು. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು.







