ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ

ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಹಾಗೂ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆದ ಒಪ್ಪಂದದಂತೆ ಕಾಂಗ್ರೆಸ್ ಬೆಂಬಲಿತ 10 ಮಂದಿ ಅಭ್ಯರ್ಥಿಗಳು ಹಾಗೂ ಸಹಕಾರ ಭಾರತಿಯ ಇಬ್ಬರು ಅಭ್ಯರ್ಥಿಗಳು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಫೆ.8ರಂದು ಮತದಾನ ನಿಗದಿಯಾಗಿತ್ತು. ಇದಕ್ಕಾಗಿ 25 ನಾಮಪತ್ರಗಳು ಸಲ್ಲಿಕೆಯಾಗಿತ್ತು. ನಾಮಪತ್ರ ಹಿಂಪಡೆಯುವ ದಿನವಾದ ಫೆ.2ರಂದು 10 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹಾಗೂ ಎರಡು ಮಂದಿ ಸಹಕಾರ ಭಾರತಿಯ ಅಭ್ಯರ್ಥಿಗಳನ್ನು ಉಳಿದವರು ನಾಮಪತ್ರ ಹಿಂದೆಗೆದುಕೊಂಡರು.
ಅವಿರೋಧ ಆಯ್ಕೆಯಾದವರು: ನಿರ್ದೇಶಕ ಸ್ಥಾನಕ್ಕೆ ಸಾಲಗಾರ ಸಾಮಾನ್ಯದಿಂದ ಅಬ್ದುಲ್ ಲತೀಫ್, ನೀಲಪ್ಪ ಗೌಡ, ಡಾ. ರಾಜ್‍ಗೋಪಾಲ ಶರ್ಮಾಬಿ., ತೋಯಜಾಕ್ಷ ಶೆಟ್ಟಿ, ಜಾರಪ್ಪ ಗೌಡ ಆಯ್ಕೆಯಾಗಿದ್ದಾರೆ. ಸಾಲಗಾರ ಅನುಸೂಚಿತ ಜಾತಿಯಿಂದ ಶಾಂತಾ, ಸಾಲಗಾರ ಅನುಸೂಚಿತ ಪಂಗಡದಿಂದ ಲಕ್ಷ್ಮಣ ನಾಯ್ಕ, ಸಾಲಗಾರ ಮಹಿಳೆಯಿಂದ ಜಯಲಕ್ಷ್ಮೀ, ರೇವತಿ ಪಿ., ಸಾಲಗಾರ ಹಿಂದುಳಿದ ವರ್ಗ (ಬಿ)ಯಿಂದ ಸುನೀಲ್ ನೆಲ್ಸನ್ ಪಿಂಟೋ, ಸಾಲಗಾರ ಹಿಂದುಳಿದ ವರ್ಗ (ಎ)ಯಿಂದ ತನಿಯಪ್ಪ ಪೂಜಾರಿ, ಸಾಲಗಾರರಲ್ಲದ್ದರಿಂದ ಬೇಬಿ ಆಯ್ಕೆಯಾಗಿದ್ದಾರೆ.
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 20 ವರ್ಷಗಳನ್ನು ಪೂರ್ಣಗೊಳಿಸಿದ್ದು, ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಈ ಹಿಂದಿನ ನಾಲ್ಕು ಅವಧಿಗಳಲ್ಲೂ ಚುನಾವಣೆ ನಡೆದಿತ್ತು. ನಾಲ್ಕು ಅವಧಿಗಳಲ್ಲೂ ನಿರ್ದೇಶಕ ರಾಗಿ ಆಯ್ಕೆಯಾಗಿ ತೋಯಜಾಕ್ಷ ಶೆಟ್ಟಿಯವರೇ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರಲ್ಲದೆ, ಸಂಘವನ್ನು ಪ್ರಗ ತಿಯ ಪಥದಲ್ಲಿ ಮುನ್ನಡೆಸಿದ್ದರು. ಆದರೆ ಈ ಬಾರಿ ಮಾತ್ರ ಹೊಂದಾಣಿಕೆಯೊಂದಿಗೆ ಸಾಗಿದ್ದು, ಹಾಗಾಗಿ ಅವಿರೋಧ ಆಯ್ಕೆ ನಡೆದಿದೆ.
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಈ ಬಾರಿ ನಾವು ಸೌಹಾರ್ದತೆಯ ಒಪ್ಪಂದ ಮಾಡಿಕೊಂಡು ಚುನಾವಣೆ ನಡೆಯದೇ ಅವಿರೋಧ ಆಯ್ಕೆಯಾಗುವಂತೆ ನೋಡಿ ಕೊಂಡಿದ್ದೇವೆ. ಈ ಮೂಲಕ ಬ್ಯಾಂಕಿಗೆ ಆಗುವ ಖರ್ಚು ಕೂಡಾ ಉಳಿಯುವಂತಾಗಿದೆ.
"ಚುನಾವಣೆ ನಡೆದಾಗ ಬ್ಯಾಂಕಿಗೂ ಖರ್ಚು, ಅಭ್ಯರ್ಥಿಗೂ ಖರ್ಚು. ಚುನಾವಣೆಯಲ್ಲಿ ಎದುರು ಬದುರಾಗುವಾಗ ಪರಸ್ಪರ ಮನಸ್ತಾಪಗಳು ಸಹಜ. ಆದ್ದರಿಂದ ಈ ಬಾರಿ ನಾವು ಪರಸ್ಪರ ಮಾತನಾಡಿಕೊಂಡು 10+2ರ ಒಪ್ಪಂದ ಮಾಡಿಕೊಂಡಿದ್ದೆವು. ಎಲ್ಲರೂ ಜೊತೆಗೂಡಿ ಸಂಘವನ್ನು ಇನ್ನಷ್ಟು ಬೆಳೆಸುವುದೇ ನಮ್ಮ ಕನಸು".
- ತೋಯಜಾಕ್ಷ ಶೆಟ್ಟಿ
ನಿಕಟಪೂರ್ವಾಧ್ಯಕ್ಷರು, ಪೆರ್ನೆ ಸಿಎ ಬ್ಯಾಂಕ್







