ಪಂಚಗ್ಯಾರಂಟಿ ಯೋಜನೆಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ : ಡಾ. ಮಧುಮಾಲ

ಮೂಡುಬಿದಿರೆ : ಆತ್ಮವಿಶ್ವಾಸವೇ ಮನುಷ್ಯನ ಸಬಲೀಕರಣದ ಮೊದಲ ಪ್ರತೀಕ. ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಆಥಿ೯ಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ಗೌರವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಮಧುಮಾಲಾ ಕೆ. ಹೇಳಿದರು.
ಅವರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಗ್ಯಾರಂಟಿ ಯೋಜನಾ ಸಮಿತಿಯ ಕಚೇರಿಯಲ್ಲಿ ನಡೆದ ಸರಕಾರದ ಪಂಚಗ್ಯಾರಂಟಿ ಯೋಜನೆಗಳ ಕುರಿತು ಮಹಿಳೆಯರಿಗೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಿರುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು.
ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯಿಂದ ಉಳಿತಾಯವಾಗುವ ಹಣವನ್ನು ಉಪಯೋಗ ಮಾಡಿಕೊಂಡು ಆಥಿ೯ಕವಾಗಿ ಸ್ವಾವಲಂಬಿಗಳಾಗುವ ಯೋಚನೆಗಳನ್ನು ಮಾಡಿಕೊಳ್ಳಬೇಕಾಗಿದೆ.
ಮಹಿಳೆಯರು ದಾರಾವಾಹಿ, ಗೋಲ್ಡ್ ರೇಟ್, ಸೀರೆ ಬೆಲೆ, ಅಡುಗೆ ಕೋಣೆ ಮತ್ತು ಹೊಸ ರುಚಿಗಳ ಮಾತುಕತೆಗೆ ಮಾತ್ರ ಸೀಮಿತವಾಗದೆ ಪಂಚಾಯತ್ ಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಭಾಗವಹಿಸಿ ತಮ್ಮ ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸುವುದಲ್ಲದೆ ಇತರ ಊರುಗಳಲ್ಲಿ ಏನೇನು ಸುದ್ಧಿಗಳಾಗಿವೆ ಎಂಬುವುದನ್ನು ನ್ಯೂಸ್ ಪೇಪರ್ ಗಳ ಮೂಲಕ ಓದಿ ತಿಳಿದುಕೊಂಡಾಗ ಜ್ಞಾನದ ಅಭಿವೃದ್ಧಿಯೂ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ.
ಲಿಂಗ ಸಮಾನತೆಯು ಬಹು ಮುಖ್ಯ ಅಂಶವಾಗಿದ್ದು ಮನೆಗಳಲ್ಲಿ ಗಂಡು-ಹೆಣ್ಣೆಂಬ ಬೇಧವನ್ನು ಮಾಡದೆ ಕೆಲಸ ಗಳನ್ನು ಹಂಚಿಕೊಂಡು ಮಾಡುವ ಮೂಲಕ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಮಕ್ಕಳಿಗೆ ಹೇಳಿಕೊಡಬೇಕು ಹಾಗೆ ಆದಾಗ ಮಹಿಳೆಗೆ ಸ್ವಲ್ಪ ಆರಾಮ ಸಿಗುತ್ತದೆ ಮತ್ತು ಮಾನಸಿಕ ಆರೋಗ್ಯವು ಸುಸ್ಥಿರವಾಗಿರಲು ಸಾಧ್ಯವಾ ಗುತ್ತದೆ ಎಂದು ಹೇಳಿದರು.
ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮನೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಂತಹ ಶಕ್ತಿಯನ್ನು ಹೆಣ್ಣು ಹುಟ್ಟಿದಾಗಿನಿಂದ ಪಡೆದುಕೊಂಡು ಬಂದಿದ್ದಾಳೆ ಇದಕ್ಕೆ ಯಾವುದೇ ಪದವಿಯ ಅಗತ್ಯವಿಲ್ಲ ಎಂದ ಅವರು ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ಪಡೆಯದೆ ಆಕೆ ಸಬಲೀಕರಣಗೊಳ್ಳುವ ದಿನಗಳು ಆದಷ್ಟು ಬೇಗ ಬರುವಂತ್ತಾ ಗಬೇಕೆಂದು ಆಶಿಸಿದರು.
ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ ಅವರು ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು.







