ಕಾಲ್ತುಳಿತ ಪ್ರಕರಣ| ಮೃತಪಟ್ಟವರಿಗೆ ಬಿಸಿಸಿಐ ತಲಾ 1 ಕೋಟಿ ರೂ. ಪರಿಹಾರ ಕೊಡಲಿ: ಬಿ.ಕೆ.ಹರಿಪ್ರಸಾದ್

ಮಂಗಳೂರು, ಜೂ.5: ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜ್ಯದ ಅಥವಾ ರಾಷ್ಟ್ರದ ಟೀಮ್ ಅಲ್ಲ. ಐಪಿಎಲ್ ನಡೆಸುವವರು ಸಹಸ್ರಾರು ಕೋಟಿಯ ಮಾಲಕರು. ಆದ ಕಾರಣ ಬಿಸಿಸಿಐ ಮೃತಪಟ್ಟ ಪ್ರತಿಯೊಬ್ಬರಿಗೆ ತಲಾ ಒಂದೊಂದು ಕೋಟಿ ರೂ. ಪರಿಹಾರ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರಕಾರವು ಸಂತ್ರಸ್ತರಿಗೆ ಬಿಸಿಸಿಐನಿಂದ ತಲಾ ಒಂದೊಂದು ಕೋಟಿ ರೂ. ಕೊಡಿಸಲಿ ಎಂದರು.
ನಾನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೆಂಬರ್. ಅಲ್ಲಿ ಕೆಪಾಸಿಟಿ ಇರುವುದು 35 ಸಾವಿರ. ಆದರೆ ಉಚಿತ ಅಂತ 3 ಲಕ್ಷ ಜನರು ಬಂದಿದ್ದಾರೆ. ನಮ್ಮಲ್ಲಿ ಅವರನ್ನು ಕಂಟ್ರೋಲ್ ಮಾಡಲು ಪೊಲೀಸರ ಸಂಖ್ಯೆ ಕಡಿಮೆ ಇತ್ತು. ಲಕ್ಷಾಂತರ ಜನರನ್ನು ಪೊಲೀಸರಿಗೆ ಹೇಗೆ ನಿಯಂತ್ರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಘಟನೆ ನಡೆಯುವಾಗ ನಾನು ಊರಲ್ಲಿ ಇರಲಿಲ್ಲ. ನನಗೆ ಅದರ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಸಾವಿಗೆ ಹೊಣೆ ಯಾರೆಂದು ಸರಕಾರವೇ ಹೇಳಬೇಕು. ಆದರೆ ಸರಕಾರ ಕ್ರಿಕೆಟ್‌ನ್ನು ಆಯೋಜಿಸಿಲ್ಲ. ಆಯೋಜಕರು ಕ್ರಿಕೆಟ್ ಪಂದ್ಯ ಆಯೋಜಿಸುವಾಗ ಸ್ಟೇಡಿಯಂನ ಭದ್ರತೆಯ ಬಗ್ಗೆ ಯೋಚಿಸಬೇಕಿತ್ತು ಎಂದರು.
ಆರ್‌ಸಿಬಿ ಜಯಿಸಿದ ಬಳಿಕ ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಮಾಯಕರು, ಯುವಕರು, ಬಲಿಯಾಗಿದ್ದಾರೆ. ಅವರ ಕುಟುಂಬಕ್ಕೆ ಭಗವಂತನು ದು:ಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.