ಮರಳು ಪೂರೈಕೆಯಾಗದೆ ನಿರ್ಮಾಣ ಕಾರ್ಯಗಳಿಗೆ ತೊಂದರೆ; ಸಿವಿಲ್ ಗುತ್ತಿಗೆದಾರರ ಸಂಘದಿಂದ ನ.10ರಂದು ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು, ನ. 8: ದ.ಕ. ಜಿಲ್ಲೆಯಲ್ಲಿ ಸಿಆರ್‌ಝೆಡ್ ಹಾಗೂ ನಾನ್ ಸಿಆರ್‌ಝೆಡ್ ವಲಯಗಳಲ್ಲಿ ಮರಳುಗಾರಿಕೆ ಹಾಗೂ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಗಣಿ ಇಲಾಖೆ ಹಾಗೂ ಉಸ್ತುವಾರಿ ಸಚಿವರಿಗೆ ಮನವಿ ನೀಡಿದ್ದರೂ ಕ್ರಮ ಆಗದ ಕಾರಣ ನ. 10ರಂದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ದ.ಕ. ಸಿವಿಲ್ ಗುತ್ತಿಗೆದಾರರ ಸಂಘ ಹೇಳಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಕಳೆದ ಅಕ್ಟೋಬರ್ 26ರಂದು ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಜಿಲ್ಲಾಡಳಿತದಿಂದ ಮರಳು ಸಮಸ್ಯೆ ಬಗೆಹರಿಸಲು ಒತ್ತಾಯಿಸಲಾಗಿತ್ತು. ಆದರೆ ಯಾವುದೇ ಸ್ಪಂದನೆ ದೊರಕಿಲ್ಲ ಎಂದರು.
ನ. 10ರಂದು ಸಂಜೆ 3ರಿಂದ 4.30ರವರೆಗೆ ಪುರಭವನದ ಎದುರು ಪ್ರತಿಭಟನೆ ನಡೆಸಲಿದ್ದು, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್, ಕೆನರಾ ಬಿಲ್ಡರ್ಸ್ ಅಸೋಸಿಯೇಶನ್, ಕ್ರೆಡಾಯ್ ಮಂಗಳೂರು, ಕರಾವಳಿ ಸಿಮೆಂಟ್ ಡೀಲರ್ಸ್ ಅಸೋಸಿಯೇಶನ್, ಸ್ಟೀಲ್‌ಡೀಲರ್ಸ್ ಅಸೋಸಿಯೇಶನ್, ಪೈಂಟ್ ಹಾರ್ಡ್‌ವೇರ್ ಡೀಲರ್ಸ್ ಅಸೋಸಿಯೇಶನ್ ನವರು ಪ್ರತಿಭಟನೆಗೆ ಕೈಜೋಡಿಸಿದ್ದಾರೆ ಎಂದು ಅವರು ಹೇಳಿದರು.
ಮರಳು ಪೂರೈಕೆಯಾಗದೆ ಈಗಾಗಲೇ ಕೈಗೆತ್ತಿಕೊಂಡಿರುವ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ರಾತ್ರಿ ಹೊತ್ತು ಲೋಡ್ ಒಂದಕ್ಕೆ 18000 ರೂ.ಗಳಿಗೆ ಮರಳನ್ನು ತರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕಟ್ಟಡ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ಕಾರ್ಮಿಕರು ಕಂಗಾಲಾಗಿದ್ದಾರೆ. ಈ ನಿರ್ಮಾಣ ಕಾಮಗಾರಿಯನ್ನು ಅವಲಂಬಿಸಿರುವ ಇತರ ಹಲವು ವಲಯಗಳವರೂ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ ಎಂದು ಅವರು ಹೇಳಿದರು.
ನಾನ್ ಸಿಆರ್‌ಝೆಡ್‌ನಡಿ ಮರಳು ಪೂರೈಕೆಗೆ ಟೆಂಡರ್ ವಹಿಸಿಕೊಂಡವರಿಗೆ ಕಳೆದ ಆಗಸ್ಟ್‌ನಲ್ಲಿಯೇ ವೇ ಬ್ರಿಡ್ಜ್ ಅಳವಡಿಸುವಂತೆ ಗಣಿ ಇಲಾಖೆ ನಿರ್ದೇಶನ ನೀಡಿತ್ತು. ಅವರು ಮಾಡಿಲ್ಲ ಎಂದಾದರೆ ಅವರ ಟೆಂಡರ್ ರದ್ದು ಪಡಿಸಿ ಇತರರಿಗೆ ನೀಡಬಹುದಿತ್ತು. ಸರಕಾರದ ಆದಾಯ ಸೋರಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಗಣಿ ಇಲಾಖೆಯೇ ಈ ವೇ ಬ್ರಿಡ್ಜ್ ಅಳವಡಿಸುವ ಕಾರ್ಯವನ್ನು ಮಾಡಬಹುದಿತ್ತು. ಅದ್ಯಾವುದನ್ನೂ ಮಾಡದೆ ಗಣಿ ಇಲಾಖೆ ವೌನವಾಗಿದೆ. ಜಿಲ್ಲಾಡಳಿತದಿಂದಲೂ ಸ್ಪಂದನೆ ದೊರಕುತ್ತಿಲ್ಲ ಎಂದು ಉಪಾಧ್ಯಕ್ಷ ದಿನಕರ ಸುವರ್ಣ ಆರೋಪಿಸಿದರು.
ಈ ಬಾರಿ ಚುನಾವಣೆಯ ಹಿನ್ನೆಲೆಯಲ್ಲಿ ಮೇ 15ರಿಂದಲೇ ಮರಳುಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆಗಸ್ಟ್ 15ರಿಂದ ನಾನ್ ಸಿಆರ್‌ಝೆಡ್‌ನಲ್ಲಿ ಮರಳು ಪೂರೈಕೆಗೆ ಅವಕಾಶ ನೀಡಿದ್ದರೂ ವೇ ಬ್ರಿಡ್ಜ್ ಅಳವಡಿಸದ ಕಾರಣ ಸಮಸ್ಯೆಯಾಗಿದೆ. ಇದರಿಂದ ಲಕ್ಷಾಂತರ ಮಂದಿ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಕಳೆದ ಸುಮಾರು 10 ವರ್ಷಗಳಿಂದೀಚೆಗೆ ಈ ಮರಳು ಪೂರೈಕೆ ಸಮಸ್ಯೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಾಧಕವಾಗಿ ಪರಿಣಮಿಸಿದೆ ಎಂದು ಕಾರ್ಯದರ್ಶಿ ದೇವಾನಂದ ದೂರಿದರು.
ಗೋಷ್ಟಿಯಲ್ಲಿ ಉಪಾಧ್ಯಕ್ಷ ಸತೀಶ್ ಕುಮಾರ್ ಜೋಗಿ, ಕೋಶಾಧಿಕಾರಿ ಸುರೇಶ್ ಜೆ., ಸದಸ್ಯರಾದ ಚಂದನ್‌ದಾಸ್, ಮಧುಸೂದನ್ ಉಪಸ್ಥಿತರಿದ್ದರು.







