ಪುತ್ತೂರು| ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ ಪ್ರಕರಣ: ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ಜು.10ಕ್ಕೆ ಮುಂದೂಡಿಕೆ

(ಸಂತ್ರಸ್ತೆ ಯುವತಿಯ ತಾಯಿ - ಆರೋಪಿ ಶ್ರೀಕೃಷ್ಣ ಜೆ. ರಾವ್)
ಪುತ್ತೂರು: ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯಾಗಿಸಿ, ಬಳಿಕ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನ ಪುತ್ರನ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮಂಗಳೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಗುರುವಾರ ನಡೆದಿದ್ದು, ಜು.10ಕ್ಕೆ ವಿಚಾರಣೆಯನ್ನು ಮುಂದೂಡಲಾಗುದೆ.
ಪ್ರಕರಣದ ವಿಚಾರಣೆ ವೇಳೆ ಸಂತ್ರಸ್ತೆ ಯುವತಿಯ ಪರವಾಗಿ ಆಕೆಯ ತಾಯಿ ನ್ಯಾಯಾಧೀಶರ ಮುಂದೆ ಹಾಜರಾದರು. ’ಸಂತ್ರಸ್ತೆಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದು, ಆಕೆ ಮೂರು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹಾಜರಾಗಲು ಸಾಧ್ಯವಾಗಿಲ್ಲ’ ಎಂದು ಮಾಹಿತಿ ನೀಡಿದರು. ಮುಂದುವರೆದು, ’ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ’ ಎಂದು ಮೌಖಿಕವಾಗಿ ವಿರೋಧ ಸ್ಪಷ್ಟಪಡಿಸಿದರು. ’ನನ್ನ ಮಗಳು ಮೂರು ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯಲ್ಲಿದ್ದಾಳೆ. ಆರೋಪಿಗೆ ಜಾಮೀನು ನೀಡಬಾರದು’ ಎಂದು ಮನವಿ ಮಾಡಿದ್ದಾರೆ.
ಸಂತ್ರಸ್ತೆಯ ತಾಯಿಯ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರಿ ಅಭಿಯೋಜಕರು (ಪಿ.ಪಿ.) ಈ ಕುರಿತು ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜು.10ಕ್ಕೆ ಮುಂದೂಡಿದೆ.
ಮಹಿಳಾ ಠಾಣೆಯಲ್ಲಿ ಜೂ.24ರಂದು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಳಿಕ ನಗರದ ಬಪ್ಪಳಿಗೆ ನಿವಾಸಿ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ಎಂಬವರ ಪುತ್ರ, ಆರೋಪಿ ಶ್ರೀಕೃಷ್ಣ ಜೆ. ರಾವ್ ತಲೆ ಮರೆಸಿಕೊಂಡಿದ್ದಾನೆ. ವಿವಿಧ ತಂಡಗಳನ್ನು ಮಾಡಿಕೊಂಡು ಪೊಲೀಸರು 10 ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.







