ಮಂಗಳೂರು ನಗರದಲ್ಲಿ 1,038 ಬಸ್‌ಗಳ ಓಡಾಟ

ಮಂಗಳೂರು, ಮಾ.5: ಮಂಗಳೂರು ನಗರದಲ್ಲಿ ರಹದಾರಿ ಪಡೆದಿರುವ 59 ಸರಕಾರಿ ಮತ್ತು 979 ಖಾಸಗಿ ಪ್ರವರ್ತಕರ ಬಸ್‌ಗಳು ಸೇರಿದಂತೆ 1038 ಬಸ್‌ಗಳು ಸಂಚರಿಸುತ್ತಿವೆ.
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳೂರು ವಿಭಾಗದ ವತಿಯಿಂದ 40 ನಗರ ಸಾರಿಗೆ ಬಸ್‌ಗಳು ಕಾರ್ಯಾಚರಿಸುತ್ತಿವೆ. ಸರಕಾರದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಹೆಚ್ಚಿನ ಸರಕಾರಿ ಬಸ್‌ಗಳ ಸೌಲಭ್ಯಕ್ಕೆ ಬೇಡಿಕೆ ಇದ್ದರೂ, ಇದೀಗ ನಗರದಲ್ಲಿ ಜಿಲ್ಲಾ ದಂಡಾಧಿಕಾರಿಯ ಅಧಿಸೂಚನೆ ಜಾರಿಯಲ್ಲಿದ್ದು, ಈ ಅಧಿಸೂಚನೆಗೆ ವಿನಾಯತಿ ನೀಡಿ ನಗರ ಪ್ರದೇಶಗಳಿಗೆ ಪರವಾನಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಆ.8, 2024 ಮತ್ತು ಡಿ.18, 2024ರಂದು ಕೆಎಸ್‌ಆರ್‌ಟಿಸಿ ಮನವಿ ಸಲ್ಲಿಸಿತ್ತು.
ಅಲ್ಲದೆ ಮಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೊಸದಾಗಿ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಬೇಡಿಕೆ ಇರುವ 40 ಮಾರ್ಗಗಳಿಗೆ (ತಡೆಯಾಜ್ಞೆ ಇರುವ 12 ನರ್ಮ್ ಮಾರ್ಗಗಳು ಸೇರಿ) ಪರವಾನಿಗೆ ಕೋರಿ ಮಂಗಳೂರಿನ ಪ್ರಾದೇಶಿಕ ಸಾರಿಗೆ ಪ್ರಾದಿಖಾರಕ್ಕೆ ಸಮಗರ ಪ್ರದೇಶ ಯೋಜನೆಯಡಿಯಲ್ಲಿ ಸಲ್ಲಿಸಲಾಗಿದ್ದರೂ, ಈ ಎಲ್ಲ ಅರ್ಜಿಗಳು ಮಂಜೂರಾತಿಗೆ ಬಾಕಿ ಇದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ವಿಧಾನ ಪರಿಷತ್‌ನಲ್ಲಿ ಸದಸ್ಯ ಐವನ್ ಡಿ ಸೋಜ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಮತ್ತು ಪುತ್ತೂರು ವಿಭಾಗಗಳು ಕರ್ಯ ನಿರ್ವಹಿಸುತ್ತಿವೆ.ಮಂಗಳೂರು ವಿಭಾಗದ ಘಟಕಗಳಿಂದ 533 ಮತ್ತು ಪುತ್ತೂರು ವಿಭಾಗದ ಘಟಕಗಳಿಂದ 371 ಸೇರಿದಂತೆ 904 ಬಸ್‌ಗಳು ಕಾರ್ಯಾಚರಿಸುತ್ತಿವೆ.
ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಕೋರಿ 303 ಮನಗಳು ಸ್ವೀಕೃತವಾಗಿದೆ. 79 ಮನವಿಗಳನ್ನು ಪರಿಗಣಿಸಲಾಗಿದ್ದು, 224 ಬೇಡಿಕೆಗಳು ಬಾಕಿ ಇರುತ್ತವೆ. ಉಡುಪಿ ಜಿಲ್ಲೆಯಿಂದ 131 ಮನವಿಗಳು ಸ್ವೀಕೃತವಾಗಿವೆ. 64 ಮನವಿಗಳನ್ನು ಪರಿಗಣಿಸಲಾಗಿದೆ. 67 ಅರ್ಜಿಗಳು ಬಾಕಿ ಇರುತ್ತದೆ.
ದ.ಕ. ಮತ್ತು ಉಡುಪಿ ಜಿಲ್ಲೆಗಳು ಖಾಸಗಿ ವಲಯವಾಗಿದ್ದು, ನಿಗಮದ ಬಸ್‌ಗಳ ಕಾರ್ಯಾಚರಣೆಗೆ ಪರವಾನಿಗೆ ಅಗತ್ಯ. ಈ ಕಾರಣದಿಂದಾಗಿ ಬೇಡಿಕೆ ಇರುವ ಮಾರ್ಗಗಳಿಗೆ ಪರವಾನಿಗೆ ಕೋರಿ ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಕೆಎಸ್‌ಆರ್‌ಟಿಸಿ 2023-24ರ ಪೂರ್ವದ 7 ವರ್ಷಗಳಿಂದ ಸಿಬ್ಬಂದಿ ನೇಮಕಾತಿ ಆಗಿಲ್ಲ. ಇದೀಗ ಚಾಲನಾ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ್ತು ಪರವಾನಿಗೆ ಮಂಜೂರಾದ ಮಾರ್ಗಗಳಿಗೆ ಹಂತ ಹಂತವಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
4 ತಾತ್ಕಾಲಿಕ ಪರವಾನಿಗೆ ಮಂಜೂರು: ಮಂಗಳೂರು -ಮೂಡಬಿದ್ರೆ -ಕಾರ್ಕಳ ವಯಾ ಕೈಕಂಬ ಗುರುಪುರ ಮಾರ್ಗದಲ್ಲಿ 4 ಕೆಎಸ್‌ಆರ್‌ಟಿಸಿ ವಾಹನಗಳಿಗೆ ತಾತ್ಕಾಲಿಕ ಪರವಾನಿಗೆ ಕೋರಿ 2023.ಜುಲೈ 21ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಡಿ.10, 2024ರಂದು 4 ತಾತ್ಕಾಲಿಕ ಪರವಾನಿಗೆಗಳು ಮಂಜೂರಾಗಿವೆ. ಡಿ.13ರಿಂದ 4 ಬಸ್‌ಗಳು ಓಡಾಡುತ್ತಿವೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.







