ದ.ಕ.ಜಿಲ್ಲೆಯ 115 ಶಾಲೆಗಳಲ್ಲಿ ದ್ವಿಭಾಷೆ ಕಲಿಕೆಗೆ ಅನುಮತಿ

ಮಂಗಳೂರು, ಜು.5: ರಾಜ್ಯದಲ್ಲಿ 4,134 ಶಾಲೆಗಳಲ್ಲಿ ದ್ವಿಭಾಷಾ ಕಲಿಕೆಗೆ ಸರಕಾರ ಅನುಮತಿ ನೀಡಿದೆ. ಈ ಪೈಕಿ ದ.ಕ.ಜಿಲ್ಲೆಯ 115 ಶಾಲೆಗಳೂ ಸೇರಿವೆ. ಈ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮವೂ ಇರಲಿದೆ.
2019-20ರಲ್ಲಿ ರಾಜ್ಯದಲ್ಲಿ ದ್ವಿಭಾಷಾ ಮಾಧ್ಯಮಗಳನ್ನು ಆರಂಭಿಸಲಾಗುತ್ತಿದೆ. ಪ್ರಥಮ ವರ್ಷ 1 ಸಾವಿರ ಶಾಲೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ಪ್ರತೀ ವರ್ಷ ದ್ವಿಭಾಷಾ ಕಲಿಕೆಗೆ ಶಾಲೆಗಳಲ್ಲಿ ಅನುಮತಿ ನೀಡುತ್ತಾ ಬರಲಾಗಿದೆ. ಪ್ರಸಕ್ತ (2025-26ನೇ) ಸಾಲಿಗೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 4,134 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭಿಸಲು ಅನುಮತಿ ನೀಡಿರುವುದು ಗಮನಾರ್ಹ.
2024-25ನೇ ಸಾಲಿನಲ್ಲಿ ರಾಜ್ಯ ಬಜೆಟ್‌ನಲ್ಲಿ 2 ಸಾವಿರ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮಗಳನ್ನು ಆರಂಭಿಸಲಾಗುತ್ತದೆ ಎಂದು ಘೋಷಿಸಲಾಗಿತ್ತು. 2024-25ನೇ ಸಾಲಿನಲ್ಲಿ 1ನೇ ತರಗತಿಯಿಂದಲೇ ದ್ವಿಭಾಷಾ ಸೂತ್ರದಲ್ಲಿ ಶಿಕ್ಷಣ ನೀಡುವ ಪ್ರಕ್ರಿಯೆ ಆರಂಭಗೊಂಡಿತು. 2025-26ನೇ ಸಾಲಿನ ಬಜೆಟ್‌ನಲ್ಲಿ ನಾಲ್ಕು ಸಾವಿರ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದರು. ಅದರಂತೆ 4,134 ಶಾಲೆಗಳಲ್ಲಿ ದ್ವಿಭಾಷೆಯಲ್ಲಿ ಶಿಕ್ಷಣ ನೀಡಲು ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಜ್ಜಾಗಿದೆ.
*ಬೆಂಗಳೂರಿಗೆ ಅಧಿಕ ಪಾಲು: 4,134 ಶಾಲೆಗಳ ಪೈಕಿ ಬೆಂಗಳೂರು ಉತ್ತರದಲ್ಲಿ 373 ಹಾಗೂ ಬೆಂಗಳೂರು ದಕ್ಷಿಣದಲ್ಲಿ 730 ಸರಕಾರಿ ಪ್ರಾಥಮಿಕ ಶಾಲೆಗಳು ಸೇರಿವೆ. ಇದು ರಾಜ್ಯದಲ್ಲೇ ಅತೀ ಹೆಚ್ಚು ದ್ವಿಭಾಷಾ ಕಲಿಕೆಗೆ ಅವಕಾಶ ಪಡೆದ ಜಿಲ್ಲೆಗಳಾಗಿವೆ.
ಪ್ರತಿ ತಾಲೂಕು/ವಲಯದಲ್ಲಿರುವ ಅತೀ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯ ಆಧಾರದಲ್ಲಿ ಶಾಲೆಗಳ ಪೈಕಿ ಆರೋಹಣ ಕ್ರಮದಲ್ಲಿ ಮೊದಲು 15 ಶಾಲೆಗಳನ್ನು ಪರಿಗಣಿಸಲಾಗುತ್ತದೆ. ಆಯಾ ತಾಲೂಕಿನಲ್ಲಿ ಇಂತಹ ಶಾಲೆಗಳು ಇಲ್ಲದಿದ್ದರೆ ಇತರ ಶಾಲೆಗಳನ್ನು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.