ಮೇ 12ರಂದು ಯೋಧರ ಸುರಕ್ಷತೆಗೆ ಉಳ್ಳಾಲ ದರ್ಗಾದಲ್ಲಿ ಪ್ರಾರ್ಥನೆ ಕಾರ್ಯಕ್ರಮ

ಉಳ್ಳಾಲ: ದೇಶ ರಕ್ಷಣೆಯಲ್ಲಿ ನಿರತರಾಗಿರುವ ಯೋಧರ ಸುರಕ್ಷತೆ ದೃಷ್ಟಿಯಿಂದ ಉಳ್ಳಾಲ ದರ್ಗಾ ಸಮಿತಿಯು ಪ್ರಾರ್ಥನೆ ಹಮ್ಮಿಕೊಂಡಿದ್ದು, ಮೇ 12ರಂದು ರಾತ್ರಿ 7ಕ್ಕೆ ದರ್ಗಾ ವಠಾರದಲ್ಲಿರುವ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ದರ್ಗಾ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಹೇಳಿದ್ದಾರೆ.
ಅವರು ದರ್ಗಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಹಲ್ಗಾಮ್ ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ಎಸಗಿರುವ ಕೃತ್ಯ ಖಂಡನೀಯ. ನಮ್ಮ ದೇಶದ ಮೇಲೆ ಉಗ್ರರ ದಾಳಿ ನಡೆದರೆ ಪ್ರತಿರೋಧ ತೋರುವುದು ನಮ್ಮ ಕರ್ತವ್ಯ. ದೇಶದ ಭದ್ರತೆಗೆ ಸೈನಿಕರು ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಅವರ ಸುರಕ್ಷತೆಯ ದೃಷ್ಟಿಯಿಂದ ದರ್ಗಾ ಸಮಿತಿಯು ಈ ಪ್ರಾರ್ಥನೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಈ ಪ್ರಾರ್ಥನೆಯ ನೇತೃತ್ವವನ್ನು ಸೈಯದ್ ಮದನಿ ಅರಬಿಕ್ ಕಾಲೇಜು ಪ್ರೊಫೆಸರ್ ನೌಮಾನ್ ನೂರಾನಿ ಹಾಗೂ ರಾಜ್ಯ ಎಸ್.ವೈ.ಎಸ್. ಸಂಘಟನಾ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಮೇ 15ರಂದು ಸನದುದಾನ ಕಾರ್ಯಕ್ರಮ
ಸನದುದಾನ: ಮೇ 15ರಂದು ಅಪರಾಹ್ನ ಎರಡು ಗಂಟೆಗೆ ಸನದುದಾನ ಸಮ್ಮೇಳನ ನಡೆಯಲಿದ್ದು, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಸನದುದಾನ ಪ್ರದಾನ ಮಾಡಲಿದ್ದಾರೆ ಎಂದು ಹನೀಫ್ ಹಾಜಿ ತಿಳಿಸಿದರು.
ಸಾಮಾಜಿಕ ಸಮಾವೇಶ: ಮೇ 16ರಂದು ಬೆಳಗ್ಗೆ 10ಕ್ಕೆ ಉಳ್ಳಾಲ ಗ್ರ್ಯಾಂಡ್ ಮಸೀದಿಗೆ ಶಿಲಾನ್ಯಾಸ, ಸಂಜೆ ಸಾಮಾಜಿಕ ಸಮಾವೇಶ ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕೋಶಾಧಿಕಾರಿ ನಾಝೀಮ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು







