ಹಳೆಯಂಗಡಿ: ಅ.12ರಂದು ನೂತನ ಸಮುದಾಯ ಭವನ ಲೋಕಾರ್ಪಣೆ

ಸುರತ್ಕಲ್: ಹಳೆಯಂಗಡಿ ಚೇಳಾಯರು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ನೂತನ ಸಮುದಾಯ ಭವನವು ಅ.12ರಂದು ಲೋಕಾರ್ಪಣೆಗೊಳ್ಳಲಿದೆ.
ಈ ಸಂಬಂಧ ಚೇಳಾಯರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಮೀನ್ ಅವರು, ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನವು ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಮುದಾಯ ಭವನಕ್ಕೆ ಕೋಟ ಶ್ರೀನಿವಾಸ ಪೂಜಾರಿಯವರು 50ಲಕ್ಷ ರೂ. ಅನುದಾನ, ಶಾಸಕ ಉಮಾನಾಥ ಕೋಟ್ಯಾನ್ ಅವರ 22 ಲಕ್ಷ ರೂ. ಅನುದಾನ ಹಾಗೂ ಬಿ.ಕೆ. ಹರಿಪ್ರಸಾದ್ ಅವರು 5 ಲಕ್ಷ ಅನುದಾನ ನೀಡಿದ್ದಾರೆ. ಜೊತೆಗೆ ಇತರ ದಾನಿಗಳ ಸಹಕಾರದಿಂದ ನೂತನ ಭವ್ಯ ಸಮುದಾಯ ಭವನವನ್ನು ನಿರ್ಮಿಸಲಾಗಿದೆ ಎಂದರು.
ಅ.11ರಂದು ಬೆಳಗ್ಗೆ 8.30ರಿಂದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಅ.12ರಂದು ಬೆಳಗ್ಗೆ 5 ಗಂಟೆಗೆ ದೇವತಾ ಪೂಜೆ, 9ಗಂಟೆಗೆ ಧಾರ್ಮಿಕ ವಿಧಿ, ಧ್ವಜಾರೋಹಣ, ಮಹಾ ಮಂಗಳಾರತಿ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ರಾಜ್ಯದ ಪ್ರಮುಖ ಮುಖಂಡರ ಉಪಸ್ಥಿತಿಯಲ್ಲಿ ಸಮುದಾಯ ಭವನ ಉದ್ಘಾಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮಧ್ಯಾಹ್ನ 1ಗಂಟೆಗೆ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ವೈವಿಧ್ಯ ನಡೆಯಲಿದ್ದು, ರಾತ್ರಿ 8ಗಂಟೆಯಿಂದ 'ಪರಮಾತ್ಮ ಪಂಜುರ್ಲಿ' ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಸಂಘದ ಸಮುದಾಯ ಭವನ ಉದ್ಘಾಟನಾ ಸಮಾರಂಭ ನಿಮಿತ್ತ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ನುಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ರಾಘವ ಸನಿಲ್ ಕೋಶಾಧಿಕಾರಿ ಗುರುವಪ್ಪ ಫೂಜಾರಿ, ಸಮುದಾಯ ಭವನದ ಕಟ್ಟಡ ಸಮಿತಿಯ ಅಧ್ಯಕ್ಷರಾದ ರಮೇಶ್ ಪೂಜಾರಿ, ಕಾರ್ಯದರ್ಶಿ ಜಯಾನಂದ ಚೇಳಾಯರು, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಆರ್. ಪೂಜಾರಿ, ಕಾರ್ಯದರ್ಶಿ ರೇಖಾ, ಕಾರ್ಯಾಧ್ಯಕ್ಷರಾದ ಶ್ರೀಕಾಂತ್ ಪೂಜಾರಿ, ರಾಜೇಶ್ ಪೂಜಾರಿ ಮಧ್ಯ, ಸಂತೋಷ್ ಅಮೀನ್, ಕವಿತಾ, ಸುಜಯ, ಸುರೇಖಾ, ಅಂಬಿಕಾ, ದಯಾನಂದ ಪೂಜಾರಿ, ಆನಂದ ಕುಕ್ಯಾನ್, ಸತೀಶ್ ಕೋಟ್ಯಾನ್, ಪುರಂದರ ಪೂಜಾರಿ, ಅರ್ಚಕ ರಮೇಶ್ ಸಾಲ್ಯಾನ್, ಸದಾಶಿವ ಸಾಲ್ಯಾನ್, ಶ್ಯಾಮಪೂಜಾರಿ, ಸದಾಶಿವ ಕರ್ಕೇರ, ಹರೀಶ್ ಪೂಜಾರಿ ಮಧ್ಯ ಮೊದಲಾದವರು ಉಪಸ್ಥಿತರಿದ್ದರು.







