ಮೇ 13ರಂದು ತಣ್ಣೀರುಬಾವಿ ಫಾತಿಮಾ ದೇವಾಲಯದ ಅಮೃತ ಮಹೋತ್ಸವ

ಮಂಗಳೂರು, ಮೇ 12: ತಣ್ಣೀರುಬಾವಿಯ ಅವರ್ ಲೇಡಿ ಆಫ್ ಫಾತಿಮಾ ದೇವಾಲಯದ ಅಮೃತ ಮಹೋತ್ಸವ ಮೇ 13ರಂದು ಜರುಗಲಿದೆ ಎಂದು ಮಹೋತ್ಸವ ಸಮಿತಿಯ ಸಂಚಾಲಕ ಕ್ಲಿಫರ್ಡ್ ಲೋಬೋ ತಿಳಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಣ್ಣೀರುಬಾವಿ ಸುತ್ತಮುತ್ತ ವಾಸವಾಗಿರುವ 90 ಕುಟುಂಬಗಳು 336 ಜನಸಂಖ್ಯೆ ಹೊಂದಿರುವ ಸಮುದಾಯದಿಂದ ಆರಾಧಿಸಲ್ಪಡುವ ದೇವಾಲಯ ಇದಾಗಿದೆ ಎಂದರು.
108 ವರ್ಷಗಳ ಹಿಂದೆ ಪೋರ್ಚ್ಗಲ್ ನ ಫಾತಿಮಾ ನಗರ 2 ಕಿ.ಮೀ. ದೂರದ ಕೋವಾದ ಈರಿಯ ಎಂಬ ಗ್ರಾಮದಲ್ಲಿ ಮೂರು ಕುರಿ ಕಾಯುವ ಮಕ್ಕಳಿಗೆ ಫಾತಿಮಾ ಮಾತೆ ಪ್ರತ್ಯಕ್ಷವಾಗಿದ್ದರು. ಬಳಿಕ ಮೇ 13ರಿಂದ ಅಕ್ಟೋಬರ್ 13ರವರೆಗೆ ನಿರಂತರವಾಗಿ ಫಾತಿಮಾ ಮಾತೆಯು ಪ್ರತ್ಯಕ್ಷರಾಗಿ ಜಗತ್ತಿನ ಶಾಂತಿಗೋಸ್ಕರ ಪ್ರಾರ್ಥನೆ ಮಾಡುವಂತೆ ತಿಳಿಸಿದ್ದರು. ಅದರಂತೆ 1950ರಲ್ಲಿ ರೋಮ್ ನಗರದಿಂದ ಅಂದಿನ ಪೋಪ್ ಮನುಷ್ಯ ಗಾತ್ರದ ಫಾತಿಮಾ ಮೂರ್ತಿಯನ್ನು ನಮ್ಮ ಜಿಲ್ಲೆಗೆ ಹಡಗಿನ ಮೂಲಕ ಕಳುಹಿಸಿದ್ದರು. ನಮ್ಮ ಧರ್ಮಪ್ರಾಂತದ ಬಿಷಪ್ ವಿಕ್ಟರ್ ಆರ್. ಫೆರ್ನಾಂಡಿಸ್ ಸ್ವಾಗತಿಸಿ, ಮಂಗಳೂರು ಧರ್ಮಪ್ರಾಂತದ ಎಲ್ಲಾ ಚರ್ಚ್ ಗಳಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ಪೂಜಿಸಲಾಯಿತು. ಕೊನೆಗೆ ತಣ್ಣೀರುಬಾವಿ ಗ್ರಾಮಕ್ಕೆ ಸುಲ್ತಾನ್ ಬತ್ತೇರಿಯಿಂದ ದೋಣಿಯ ಮೂಲಕ ದಾಟಿ ಎತ್ತಿನಗಾಡಿಯಲ್ಲಿ ಹಿರಿಯರು ಸ್ವಾಗತಿಸಿ ಚರ್ಚ್ನಲ್ಲಿ ಮೇ 13ರಂದು ಸ್ಥಾಪಿಸಲಾಯಿತು. ಅಂದಿನಿಂದ ಫಾತಿಮಾ ಮಾತೆ ಬೇಡಿದ ವರ ನೀಡುವ ತಾಯಿಯಾಗಿ ಎಲ್ಲರ ಸಂಕಷ್ಟ ಪರಹರಿಸುತ್ತಾ ಬಂದಿದ್ದಾರೆ ಎಂದವರು ಹೇಳಿದರು.
ಫಾತಿಮಾ ಮಾತೆ ದೇವಾಲಯದ ಅಮೃತ ಮಹೋತ್ಸವದ ಅಂಗವಾಗಿ ನಾಳೆ ಪೂರ್ವಾಹ್ನ 11:30ಕ್ಕೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ಬಿಷಪ್ ರೆ.ಫಾ. ಡಾ. ಪೀಟರ್ ಪೌಲ್ ಸಲ್ಡಾನ ಅಧ್ಯಕ್ಷತೆ ವಹಿಸಲಿದ್ದಾರೆ. ಹಿಂದಿನ ಬಿಷಪ್ ರೆ.ಫಾ. ಡಾ.ಅಲೋಶಿಯಸ್ ಪೌಲ್ ಡಿಸೋಜ ಸೇರಿದಂತೆ ಹಲವು ಧರ್ಮಗುರುಗಳು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯದ ಮುಖ್ಯ ಧರ್ಮಗುರು ರೆ.ಫಾ. ಲಾರೆನ್ಸ್ ಡಿಸೋಜ, ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಡಾರ್ವಿನ್ ಕುವೆಲ್ಲೋ, ಕಾರ್ಯದರ್ಶಿ ತೆಲ್ಮಾ ಡಿಸೋಜ, 21 ಕಮಿಷನ್ ಗಳ ಸಂಯೋಜಕಿ ಫಿಲೋಮಿನಾ ಕುವೆಲ್ಲೋ, ಗುರಿಕಾರ ಮಾರ್ಕ್ ವೇಗಸ್, ಅಲೋಶಿಯಸ್ ಕುವೆಲ್ಲೋ ಉಪಸ್ಥಿತರಿದ್ದರು.