ಮಂಗಳೂರು: ಸೆ. 14ರಂದು ಮಸೀದಿ ದರ್ಶನ
ಮಂಗಳೂರು, ಸೆ.11: ಜಾಮಿಯಾ ಮಸೀದಿ ಕುದ್ರೋಳಿ ಆಡಳಿತ ಮಂಡಳಿ, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಜಂಟಿಯಾಗಿ ಮಸೀದಿ ದರ್ಶನ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಮಂಗಳೂರು ಕುದ್ರೋಳಿಯಲ್ಲಿರುವ ಜಾಮಿಯಾ ಮಸೀದಿಯನ್ನು ಸೆ. 14ರಂದು ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೆ ಸರ್ವಧರ್ಮಿಯ ಸ್ತ್ರೀ ಪುರುಷರಿಗೆ ತೆರೆದಿಡಲು ನಿರ್ಧರಿಸಿದ್ದೇವೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರಿನ ಹೋಲಿ ರೊಝಾರೀ ಚರ್ಚ್‌ನ ಫಾ. ವಲೇರಿಯನ್ ಡಿಸೋಜ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್., ಮೊಗವೀರ ಸಂಘದ ಅಧ್ಯಕ್ಷ ಲೋಕೇಶ್ ಪುತ್ರನ್, ಉರ್ವ ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ರಾಜೇಶ್ ಉರ್ವ, ಗಣ್ಯರು ಭಾಗವಹಿಸುವರು. ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ ಸಹಿತ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ಸ್ಥಾನೀಯ ಅಧ್ಯಕ್ಷ ಇಸ್ಹಾಕ್ ಪುತ್ತೂರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಸ್ಪರ ಮತ ಧರ್ಮಗಳ ನಡುವೆ ಅಪನಂಬಿಕೆ, ದ್ವೇಷ ದೂರ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಸೀದಿಗೆ ಆಗಮಿಸಿದವರ ಕುತೂಹಲ, ಪ್ರಶ್ನೆ, ಜಿಜ್ಞಾಸೆಗಳಿಗೆ ಸೂಕ್ತ ವಿವರಣೆ ನೀಡಲಾಗುವುದು. ಮಸೀದಿಯ ಒಳಗೆ ಸ್ತ್ರೀ ಪುರುಷ ಸಹಿತ ಸರ್ವ ಧರ್ಮೀಯರೂ ಆಗಮಿಸಿ ಅದರೊಳಗಿನ ಚಟುವಟಿಕೆಗಳನ್ನು ವೀಕ್ಷಿಸಿ ಪ್ರಶ್ನೆಗಳಿದ್ದರೆ ಕೇಳಿ ವಿವರಣೆ ಪಡೆದುಕೊಳ್ಳಬಹುದು ಎಂದರು.
ಕುದ್ರೋಳಿ ಜಾಮಿಯಾ ಮಸೀದಿ ಕಾರ್ಯದರ್ಶಿ ಎಸ್.ಎ. ಖಲೀಲ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ.ಅಶ್ರಫ್, ಮುಸ್ಲಿಂ ಐಕ್ಯತಾ ವೇದಿಕೆ, ಕುದ್ರೋಳಿ ಸಂಚಾಲಕ ಅಬ್ದುಲ್ ಅಝೀಝ್, ಸ್ವಾಗತ ಸಮಿತಿ ಉಪಾಧ್ಯಕ್ಷ ಯಾಸೀನ್ ಕುದ್ರೋಳಿ ಉಪಸ್ಥಿತರಿದ್ದರು.







