ಐಐಎಸ್‍ಇಆರ್ ಪರೀಕ್ಷಾ ಫಲಿತಾಂಶ: ಶ್ರೇಯಾನ್ ಕಾವಿನಮೂಲೆಗೆ 150ನೇ ರ‍್ಯಾಂಕ್

ಸುಳ್ಯ: ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದ ಪ್ರತಿಷ್ಠಿತ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಆಂಡ್ ರಿಸರ್ಚ್ (ಐಐಎಸ್‍ಇಆರ್) ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೇಯಾನ್ ಕಾವಿನಮೂಲೆಯವರಿಗೆ ಆಲ್ ಇಂಡಿಯಾ ಕೆಟಗರಿಯಲ್ಲಿ 150ನೇ ರ‍್ಯಾಂಕ್ ಲಭಿಸಿದೆ.
ಅಖಿಲ ಭಾರತ ಮಟ್ಟದಲ್ಲಿ ಜನರಲ್ ಕೆಟಗರಿ ವಿಭಾಗದಲ್ಲಿ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಗಳನ್ನು ಸಂಯೋಜಿಸಲು ಮತ್ತು ಉತ್ತೇಜಿಸಲು ಭಾರತ ಸರಕಾರ ಬೆಹಾರ್ಂಪುರ, ಭೋಪಾಲ್, ಕೋಲ್ಕೊತಾ, ಮೊಹಾಲಿ, ಪುಣೆ, ತಿರುವನಂತಪುರಂ ಮತ್ತು ತಿರುಪತಿಗಳಲ್ಲಿ ಐಐಎಸ್‍ಇಆರ್ ಗಳನ್ನು ಸ್ಥಾಪಿಸಿದೆ. ವಿಜ್ಞಾನ ವಿಷಯದ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆಗಳ ಪ್ರವೇಶಕ್ಕೆ ಶ್ರೇಯಾನ್ ಆಯ್ಕೆಯಾಗಿದ್ದಾರೆ.
ವಿಜ್ಞಾನದಲ್ಲಿ ಸಂಶೋಧನೆ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಆವಿಷ್ಕರಿ ಸುವ ಮತ್ತು ಅನುಷ್ಠಾನಗೊಳಿಸುವ ಮೂಲಕ ರಾಷ್ಟ್ರವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿ ಕೊಡುವುದು ಐಐಎಸ್‍ಇಆರ್ ಪ್ರಮುಖ ಗುರಿಯಾಗಿದೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದಿರುವ ಶ್ರೇಯಾನ್ ಕಾವಿನಮೂಲೆಯವರು ಬಾಳಿಲ ಗ್ರಾಮದ ಪ್ರಶಾಂತ್ ಕಾವಿನಮೂಲೆ ಮತ್ತು ಜಯಗೌರಿ ದಂಪತಿಯ ಪುತ್ರ.





