ಕಟ್ಟಡ- ನಿರ್ಮಾಣ ರಂಗ ಸ್ಥಗಿತ: ಆ.18ರಂದು ಕಾರ್ಮಿಕ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

ಮಂಗಳೂರು, ಆ. 14: ಕಳೆದ ಮೂರು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಭಿವ್ರದ್ಧಿಗೆ ಕೊಡುಗೆ ಕೊಡುತ್ತಿದ್ದ ಕಟ್ಟಡ ಮತ್ತು ನಿರ್ಮಾಣ ರಂಗದ ಕೆಲಸ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಇದರಿಂದಾಗಿ ಕಾರ್ಮಿಕರು ಕೆಲಸ ವಿಲ್ಲದೆ ಅತಂತ್ರರಾಗಿದ್ದು, ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸಿಐಟಿಯು ಮತ್ತು ಎಐಟಿಯುಸಿ ಕಾರ್ಮಿಕ ಸಂಘಟನೆಗಳು ಆ. 18ರಂದು ಜಂಟಿ ಪ್ರತಿಭಟನೆ ನಡೆಸಲಿವೆ.
ಈ ಬಗ್ಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಸಿಐಟಿಯು ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಯಾದವ ಶೆಟ್ಟಿ, ಅಕ್ರಮವಾಗಿ ಕೆಲವು ಕಲ್ಲು ಮತ್ತು ಮರಳು ಗಣಿಗಾರಿಕೆಯನ್ನು ತಡೆಯುವ ಅಧಿಕಾರಿಗಳ ಕ್ರಮವು ಈ ರಂಗದ ಕಾಮಗಾರಿಗೆ ಕಚ್ಚಾ ವಸ್ತುಗಳ ಲಭ್ಯವಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಕಾನೂನು ಬದ್ಧ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಗಣಿಗಾರಿಕೆಗೆ ವ್ಯವಸ್ಥೆ ಮಾಡುವಲ್ಲಿ ಕರ್ನಾಟಕ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರಸ್ತುತ ಸಮಸ್ಯೆಯಿಂದ ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳು ಲಭ್ಯವಿಲ್ಲದುದರಿಂದಾಗಿ ಕಟ್ಟಡ ಮತ್ತು ನಿರ್ಮಾಣ ರಂಗದ ಕೆಲಸಗಳು ಸ್ಥಗಿತ ಗೊಂಡಿವೆ. ಈ ರಂಗದಲ್ಲಿ ಕೆಲಸ ಮಾಡುವ ವಿವಿಧ ನಮೂನೆಯ ಕಾರ್ಮಿಕರಿಗೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಅವರು ಮತ್ತು ಅವರ ಮನೆ ಮಂದಿ ಜೀವನ ನಿರ್ವಹಣೆ ಮಾಡುವುದು ತ್ರಾಸದಾಯಕವಾಗಿದೆ. ಜನಸಾಮಾನ್ಯರು ತಮ್ಮ ವಸತಿಗಾಗಿ ಮನೆಕಟ್ಟುವ ಯೋಜನೆ ಸ್ಥಗಿತಗೊಂಡು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಲಾರಿಗಳಲ್ಲಿ ದುಡಿಯುವ ಕಾರ್ಮಿಕರು. ಲಾರಿ ಮಾಲಿಕರು, ಅಂಗಡಿ ಮಾಲಿಕರು, ಅಂಗಡಿ -ಮುಗಟ್ಟುಗಳ ಮಾಲೀಕರು, ಕೆಲಸಗಾರರು, ಇತರ ವ್ಯಾಪಾರಿ ವರ್ಗ ಮತ್ತು ಆರ್ಥಿಕ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ತೊಂದರೆಗೊಳಗಾಗಿದ್ದಾರೆ ಎಂದು ಅವರು ಹೇಳಿದರು.
ಮರಳಿನ ಸಂಗ್ರಹ ಸಾಕಷ್ಟಿದ್ದರೂ ಅದರ ವಿತರಣೆಯ ವ್ಯವಸ್ಥೆ ಸರಳೀಕೃತವಾಗಿಲ್ಲದೆ ಅದರ ಹತ್ತಿರ ಸರಿಯಲು ಆಸಕ್ತಿ ಇಲ್ಲದಾಗಿದೆ ಲಭ್ಯ ಇರುವ ಮರಳು ಮತ್ತು ಕೆಂಪು-ಕಪ್ಪು ಕಲ್ಲು ಅತ್ಯಂತ ದುಬಾರಿ ಆಗಿದೆ. ಈ ನಿಟ್ಟಿನಲ್ಲಿ ಹಲವಾರು ಸುತ್ತಿನ ಮನವಿ, ಪ್ರತಿಭಟನೆ ಹೋರಾಟಗಳು ನಡೆದು ಸರಕಾರದ ಮೇಲೆ ಒತ್ತಡ ಹೇರಿಕೆ ಮಾಡಲಾಗಿದ್ದರೂ ಸರಕಾದ ಕ್ರಮಗಳೂ ಶೂನ್ಯವಾಗಿದೆ. ಹಾಗಾಗಿ ಆ. 18ರಂದು ಬೆಳಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರ ಮೆರವಣಿಗೆ ಹಾಗೂ ಮಿನಿ ವಿಧಾನ ಸೌಧದ ಎದುರು ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದರು.
*ಕರಾವಳಿ ಜಿಲ್ಲೆಗಳಲ್ಲಿ ಸರಾಗವಾಗಿ ಮತ್ತು ಸರಳವಾಗಿ ಮರಳು ಪೂರೈಕೆ ಆಗುವಂತೆ ಕರಾವಳಿ ಮರಳು ನೀತಿ ರೂಪಿಸಬೇಕು.
*ಪರಿಸಹ ಸ್ನೇಹಿ ಮರಳುಗಾರಿಕೆ ಹಾಗೂ ನಿಯಮಬದ್ಧ ಕೆಂಪು ಕಲ್ಲು ಮತ್ತು ಕಪ್ಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು.
*ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು, ಕೆಂಪು ಕಲ್ಲು, ಕಪ್ಪು ಕಲ್ಲು ಮತ್ತು ಜಲ್ಲಿ ಸಿಗುವಂತಾಗಬೇಕು. ಮನೆಕಟ್ಟಲು ಬೇಕಾಗುವ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ಕ್ರಮಕೈಗೊಳ್ಳಬೇಕು.
*ಕಟ್ಟಡ ಮತ್ತು ನಿರ್ಮಾಣ ರಂಗದ ಕಾರ್ಮಿಕರು ಕೆಲಸವಿಲ್ಲದೆ ತೊಂದರೆಗೆ ಒಳಗಾಗಿದ್ದು ಅವರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಮಾಸಿಕ 10,000ರೂ.ಗಳನ್ನು ನೀಡಬೇಕು.
* ಕೇರಳದ ಮಾದರಿಯಲ್ಲಿಯೇ ರಾಜಧನ ಪಾವತಿಸುವ ವ್ಯವಸ್ಥೆ ಆಗಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿರಿಸಿ ಪ್ರತಿಭಟನೆ ನಡೆಯಲಿದೆ ಎಂದು ಎಐಟಿಯುಸಿ ಉಪಾಧ್ಯಕ್ಷ ಶೇಖರ್ ಬಿ. ತಿಳಿಸಿದರು.
ಗೋಷ್ಟಿಯಲ್ಲಿ ಸಿಐಟಿಯು ಕೋಶಾಧಿಕಾರಿ ಯೋಗೀಶ್ ಜಪ್ಪಿನಮೊಗರು, ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರವಿಚಂದ್ರ ಕೊಂಚಾಡಿ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಸುರೇಶ್ ಕುಮಾರ್ ಉಪಸ್ಥಿತರಿದ್ದರು.







