ತುಳುವಿಗೆ 2ನೇ ಭಾಷೆಯಾಗಿ ಮಾನ್ಯತೆ ನೀಡಲು ಸಿಎಂ ಜೊತೆ ಚರ್ಚೆ: ಸ್ಪೀಕರ್ ಯು.ಟಿ. ಖಾದರ್

ಮಂಗಳೂರು, ಮಾ.15: ರಾಜ್ಯದಲ್ಲಿ ತುಳುವಿಗೆ 2ನೇ ಭಾಷೆಯಾಗಿ ಮಾನ್ಯತೆ ನೀಡಲು ಬಜೆಟ್ ಅಧಿವೇಶನ ಬಳಿಕ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಚರ್ಚಿಸಿ ಅಂತಿಮ ರೂಪುರೇಷೆ ಹಾಕಿ ಕೊಳ್ಳಲಾಗುವುದು ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಶನಿವಾರ ಇಲ್ಲಿನ ತುಳು ಭವನದಲ್ಲಿ ಆಯೋಜಿಸಲಾದ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಳು ಭಾಷೆಗೆ ರಾಜ್ಯದಲ್ಲಿ ಮಾನ್ಯತೆ ನೀಡುವ ಬಗ್ಗೆ ಈಗಾಗಲೇ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ತುಳು ಭಾಷೆ ಮಂಗಳೂರಿನಿಂದ ಬ್ರಹ್ಮಾವರ ವರೆಗೆ ಮಾತ್ರ ಇದ್ದು, ನಂತರ ತುಳು ಅರ್ಥವಾಗುವುದಿಲ್ಲ. ಒಟ್ಟಾರೆ ತುಳು ಭಾಷಿಕರ ಸಂಖ್ಯೆ 10 ಲಕ್ಷಕ್ಕೂ ಕಡಿಮೆ ಇದೆ. ಕರಾವಳಿಯ ಹಿರಿಯರ, ತುಳು ವಿದ್ವಾಂಸರ ಸಲಹೆ, ಸೂಚನೆ ಪಡೆದುಕೊಂಡು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಈಗ ಲಂಬಾಣಿ ಭಾಷಿಕರೂ ಅವರ ಭಾಷೆಗೆ ಮಾನ್ಯತೆ ನೀಡುವಂತೆ ಒತ್ತಡ ತರುತ್ತಿದ್ದಾರೆ. ತುಳುವರ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದರು.
ಉಳ್ಳಾಲದಲ್ಲಿ ‘ತುಳು ಗ್ರಾಮ’: ಹೊರಗಿನವರು ಮಂಗಳೂರಿಗೆ ಬಂದಾಗ ಅವರಿಗೆ ತುಳು ಭಾಷೆ, ಸಂಸ್ಕೃತ ವಿಚಾರಗಳನ್ನು ನಮ್ಮ ಯುವಕರು ತಿಳಿಸಬೇಕು. ಅಂತಹ ಅವಕಾಶ ಈಗ ಕಾಣುತ್ತಿಲ್ಲ. ಅದಕ್ಕಾಗಿ ಉಳ್ಳಾಲದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ‘ತುಳು ಗ್ರಾಮ’ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಅದನ್ನು ಪ್ರವಾಸಿ ಕೇಂದ್ರವಾಗಿ ಪರಿವರ್ತಿಸಲಾಗುವುದು. ಅಲ್ಲಿ ಪ್ರತಿ ವರ್ಷ ಕಾರ್ಯಕ್ರಮ ಏರ್ಪಡಿಸಲು ಅನುದಾನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪುಸ್ತಕ ಆಯೋಜನೆಯಾಗಲಿ: ಬೆಂಗಳೂರು ವಿಧಾನಸೌಧದಲ್ಲಿ ಪುಸ್ತಕ ಮೇಳ ಏರ್ಪಡಿಸಿದಂತೆ ಮುಂದೆ ಬೆಳಗಾವಿ ಸುವರ್ಣ ಸೌಧದಲ್ಲೂ ಪುಸ್ತಕ ಮೇಳ ಏರ್ಪಡಿಸಲು ಚಿಂತಿಸಲಾಗಿದೆ. ಬೆಂಗಳೂರಲ್ಲಿ ಪುಸ್ತಕ ಮೇಳ ಮುಂದೆಯೂ ಮುಂದುವರಿಯಲಿದೆ. ಈ ಬಾರಿ ಎಲ್ಲ ಅಕಾಡೆಮಿ ಹಾಗೂ ಪುಸ್ತಕ ಸಂಸ್ಥೆಗಳಿಗೆ ಉಚಿತವಾಗಿ ಸ್ಟಾಲ್ ಜೊತೆಗೆ ಆತಿಥ್ಯವನ್ನೂ ನೀಡಲಾಗಿದೆ. ಇಂತಹ ಪುಸ್ತಕ ಮೇಳಗಳನ್ನು ಅಕಾಡೆಮಿಗಳೂ ಇಲ್ಲಿ ಮಾಡಬೇಕು ಎಂದರು.
ತುಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ತುಳು ವಾರ ಪತ್ರಿಕೆಯನ್ನು ಹೊರ ತರಬೇಕು. ಅದಕ್ಕೆ ಎಲ್ಲ ಮನೆಗಳಿಂದ ಕಡ್ಡಾಯ ಚಂದಾದಾರಿಕೆ ಮಾಡಬೇಕು. ತುಳುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಸಾಧಿಸುವ ಶಕ್ತಿಯನ್ನು ಗಳಿಸಿಕೊಳ್ಳುತ್ತಾರೆ ಎಂದರು.







