ಬೆಳ್ತಂಗಡಿ: 2 ಗ್ರಾಪಂ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲಿತರಿಗೆ ಗೆಲುವು

ಸಾಂದರ್ಭಿಕ ಚಿತ್ರ (PTI)
ಬೆಳ್ತಂಗಡಿ: ತಾಲೂಕಿನ ಎರಡು ಗ್ರಾಮ ಪಂಚಾಯತ್ ಗಳಲ್ಲಿ ತೆರವಾಗಿದ್ದ ತಲಾ ಒಂದೊಂದು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಹೊಸಂಗಡಿ ಗ್ರಾಮ ಪಂಚಾಯತ್ ನ ಮೂರನೇ ವಾರ್ಡ್ ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ ಬಂಗೇರ ಗೆಲುವಿನ ನಗೆ ಬೀರಿದ್ದಾರೆ.
ಆನಂದ ಬಂಗೇರರಿಗೆ 457ಮತಗಳು ಲಭಿಸಿದ್ದು, ಅವರ ವಿರುದ್ಧ ಬಿಜೆಪಿ ಬೆಂಬಲಿತರಾಗಿ ಕಣಕ್ಕೆ ಇಳಿದಿದ್ದ ಸುನೀಲ್ ಶೆಟ್ಟಿಯವರಿಗೆ 274 ಮತಗಳು ಮಾತ್ರ ಲಭಿಸಿವೆ. ಆನಂದ ಬಂಗೇರ 183 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯ ಹರಿಪ್ರಸಾದ್ ಅವರ ನಿಧನದಿಂದ ಈ ಸ್ಥಾನ ತೆರವಾಗಿತ್ತು.
ಪುದುವೆಟ್ಟು ಗ್ರಾಮ ಪಂಚಾಯತ್ ನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಲಕ್ಷ್ಮೀ ಗೆಲುವು ಪಡೆದಿದ್ದಾರೆ.
ಜಯಲಕ್ಷ್ಮೀ 372 ಮತಗಳನ್ನು ಪಡೆದು ವಿಜೇತರಾದರು. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಕಣಕ್ಕೆ ಇಳಿದಿದ್ದ ಸಿಂಧೂ ಅವರಿಗೆ 120 ಮತಗಳು ಮಾತ್ರ ಲಭಿಸಿತ್ತು. ಜಯಲಕ್ಷ್ಮೀ 252 ಮತಗಳ ಅಂತರದ ಗೆಲುವು ದಾಖಲಿಸಿದರು.
ಬಿಜೆಪಿ ಬೆಂಬಲಿತ ಸದಸ್ಯೆ ಅನಿತಾ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು.





