ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ
►ಧರ್ಮಸ್ಥಳ ಗ್ರಾಮದ ಕಲ್ಕಜೆ ಎಂಬಲ್ಲಿ ನಡೆದಿದ್ದ ಘಟನೆ

ಮಂಗಳೂರು, ಜ.29: ಬೆಳ್ತಂಗಡಿಯ ಧರ್ಮಸ್ಥಳ ಗ್ರಾಮದ ಕಲ್ಕಜೆ ದೊಂಡೋಲೆ ಎಂಬಲ್ಲಿನ 15ರ ಹರೆಯದ ಬಾಲಕಿಯನ್ನು ಅತ್ಯಾಚಾರ ಎಸಗಿದ ಪಕ್ಕದ ಮನೆಯ ಆರೋಪಿ ಕೆ.ಎಸ್. ಕೇಶವ ಪೂಜಾರಿ (43) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ. ಎಸ್. 20 ವರ್ಷದ ಕಠಿಣ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ. ಅಲ್ಲದೆ 55,000 ರೂ.ದಂಡ ಪಾವತಿಸುವಂತೆ ಆದೇಶಿಸಿದ್ದಾರೆ.
ಆರೋಪಿ ಕೇಶವ ಪೂಜಾರಿಯು ಬಾಲಕಿಯ ನೆರೆಕರೆಯ ಮನೆಯವನಾಗಿದ್ದು, ಬಾಲಕಿಯ ಮನೆಗೆ ಹೋಗಿಬರುತ್ತಿದ್ದ. ಮನೆ ಮಂದಿ ಇಲ್ಲದ ಸಮಯ ಬಾಲಕಿಯ ವಿರೋಧ ಲೆಕ್ಕಿಸದೆ ಅತ್ಯಾಚಾರ ಎಸಗಿದ್ದ. ಬಾಲಕಿಯ ಕಾಲಿನಲ್ಲಿ ಊತ ಕಂಡು ಬಂದ ಕಾರಣ ಬಾಲಕಿಯ ತಾಯಿಯು ಆರೋಪಿಯ ಬಳಿ ಈ ವಿಚಾರವನ್ನು ತಿಳಿಸಿ ಆತನೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ 5 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿತ್ತು.
ತಕ್ಷಣ ಆರೋಪಿಯು ತನ್ನ ಹೆಸರನ್ನು ಹೇಳಬೇಡ. ಬೇರೆ ಯಾರದ್ದಾದರೂ ಹೆಸರು ಹೇಳು. ಇಲ್ಲದಿದ್ದರೆ ನಮ್ಮಿಬ್ಬರಿಗೂ ಶಿಕ್ಷೆಯಾಗುತ್ತದೆ ಎಂದು ಬೆದರಿಸಿದ ಕಾರಣ ಬಾಲಕಿ ಬೇರೆ ಹೆಸರು ಹೇಳಿದ್ದಳು. ಅದರಂತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ವಿಚಾರಣೆಗೊಳಪಡಿಸಿದ್ದಲ್ಲದೆ, ಆಪ್ತ ಸಮಾಲೋಚನೆ ಮೂಲಕ ಧೈರ್ಯ ತುಂಬಿ ಪುನಃ ವಿಚಾರಿಸಿದಾಗ ತಾನು ಗರ್ಭ ಧರಿಸಲು ಆರೋಪಿ ಕೇಶವ ಪೂಜಾರಿಯೇ ಕಾರಣ ಎಂದ ಬಳಿಕ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅಲ್ಲದೆ ಪೊಲೀಸ್ ಇನ್‌ಸ್ಪೆಕ್ಟರ್ ನಾಗೇಶ್ ಕೆ. ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಬಾಲಕಿಯ ಗರ್ಭಪಾತ ಮಾಡಿಸಿದ್ದರೂ ಭ್ರೂಣದ ಅಂಶವನ್ನು ಮತ್ತು ಬಾಲಕಿ ಹಾಗೂ ಆರೋಪಿಯ ಮಾದರಿ ರಕ್ತವನ್ನು ಡಿಎನ್‌ಎ ಪರೀಕ್ಷೆ ಮಾಡಿಸಿದಾಗ ಕೇಶವ ಪೂಜಾರಿಯು ಜೈವಿಕ ತಂದೆ ಎನ್ನುವ ವರದಿ ಬಂದಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿ ಕೆ.ಎಸ್.ಕೇಶವ ಪೂಜಾರಿಗೆ ಅತ್ಯಾಚಾರ ಮಾಡಿದ್ದಕ್ಕೆ ಸೆ. 376(2)(ಎನ್), 376(3) ಮತ್ತು ಸೆ.6 ಪೋಕ್ಸೊ ಕಾಯ್ದೆಯಂತೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 50,000 ರೂ.ದಂಡ ವಿಧಿಸಿದ್ದಾರೆ. ಜೀವ ಬೆದರಿಕೆ ಹಾಕಿರುವುದಕ್ಕೆ ಸೆ.506ರ ಪ್ರಕಾರ 3 ತಿಂಗಳ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದ್ದಾರೆ. ಒಟ್ಟು 55,000 ರೂ.ವನ್ನು ಬಾಲಕಿಗೆ ಪಾವತಿಸುವಂತೆ ಆದೇಶಿಸಿದ್ದಾರೆ. ಅಲ್ಲದೆ ಸಂತ್ರಸ್ಥರ ಪರಿಹಾರ ಯೋಜನೆಯಡಿ ಬಾಲಕಿಗೆ ಹೆಚ್ಚುವರಿಯಾಗಿ 6,45,000 ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ಸೂಚಿಸಿದ್ದಾರೆ.
ಸರಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ವಾದಿಸಿದ್ದರು.







