ಮೇ 21-31: ಜಂಇಯ್ಯತುಲ್ ಖುತಬಾದಿಂದ 'ಅಮಲುಮುಕ್ತ ಮೊಹಲ್ಲಾ' ಅಭಿಯಾನ

ಸಾಂದರ್ಭಿಕ ಚಿತ್ರ
ಮಂಗಳೂರು, ಮೇ 19: ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಅಮಲು ಪದಾರ್ಥ ಸೇವನೆ ಚಟದಿಂದ ಸಮುದಾಯವನ್ನು ವಿಮುಕ್ತರನ್ನಾಗಿಸುವ ನಿಟ್ಟಿನಲ್ಲಿ ಸಮಸ್ತ ಕೇರಳ ಜಂ ಇಯ್ಯತುಲ್ ಖುತಬಾ ವತಿಯಿಂದ ಮೊಹಲ್ಲಾಗಳಲ್ಲಿ 'ಅಮಲುಮುಕ್ತ ಮೊಹಲ್ಲಾ' ಎಂಬ ಜಾಗೃತಿ ಅಭಿಯಾನವನ್ನು ಮೇ 21ರಿಂದ ಮೇ 31ರ ತನಕ ನಡೆಸಲು ಸಮಿತಿಯು ತೀರ್ಮಾನಿಸಿದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ತಿಳಿಸಿದ್ದಾರೆ.
ಅಭಿಯಾನದ ಕೇಂದ್ರ ಮಟ್ಟದ ಉದ್ಘಾಟನೆಯನ್ನು ಮೇ 21ರಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಕಲ್ಲಿಕೋಟೆಯಲ್ಲಿ ನೆರವೇರಿಸಲಿದ್ದಾರೆ.
ಮೇ 21ರಂದು ವಲಯ ಮಟ್ಟದ ಖುತಬಾ ಸಂಗಮಗಳು ದೇರಳಕಟ್ಟೆ ಎಸ್ಕೆಎಸ್ಸೆಸ್ಸೆಫ್ ಕಚೇರಿ, ಬೆಳ್ತಂಗಡಿ ದಾರುಸ್ಸಲಾಂ ಕ್ಯಾಂಪಸ್, ಪುತ್ತೂರು ಬದ್ರಿಯಾ ಮಸೀದಿ, ಕಡಬ ಟೌನ್ ಮದ್ರಸ, ಬಿ.ಸಿ.ರೋಡಿನಲ್ಲಿರುವ ಎಸ್ಕೆಎಸ್ಸೆಸ್ಸೆಫ್ ವೆಸ್ಟ್ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಹಮೀದ್ ದಾರಿಮಿ ಸಂಪ್ಯ, ಅಬ್ಬಾಸ್ ದಾರಿಮಿ ಕೆಲಿಂಜ, ತಾಜುದ್ದೀನ್ ರಹ್ಮಾನಿ ಕುಂಬ್ರ, ರಿಯಾಝ್ ರಹ್ಮಾನಿ ಕಿನ್ಯ ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಲಿದ್ದಾರೆ.
ಮೇ 24ರಂದು ಜುಮಾ ನಮಾಝ್ ಬಳಿಕ ಜಿಲ್ಲಾದ್ಯಂತ ಎಲ್ಲಾ ಮಸೀದಿಗಳಲ್ಲಿ ಖತೀಬ್ ಉಸ್ತಾದರು ಈ ಬಗ್ಗೆ ಭಾಷಣ ನಡೆಸಲಿದ್ದಾರೆ. ಮೇ 25ರಿಂದ ಮೇ 30ರ ತನಕ ಪ್ರತೀ ಮೊಹಲ್ಲಾಗಳಲ್ಲಿ ಕುಟುಂಬ ಸಂಗಮಗಳು ನಡೆಯಲಿದ್ದು, ಸ್ಥಳೀಯ ಖತೀಬ್ ಉಸ್ತಾದರು ನೇತೃತ್ವ ವಹಿಸಲಿದ್ದಾರೆ. ಅಮಲು ಪದಾರ್ಥಗಳ ಸೇವನೆಯ ಅಪಾಯದ ವಿವರಣೆಯುಳ್ಳ ಕಿರುಹೊತ್ತಗೆಯನ್ನು ಮನೆ ಮನೆಗಳಿಗೆ ವಿತರಿಸಲಾಗುವುದು. ಮೇ-31ರಂದು ಮಸೀದಿಗಳಲ್ಲಿ ಡ್ರಗ್ಸ್ ಬಗ್ಗೆ ಉಪನ್ಯಾಸ ಹಾಗೂ ಪ್ರಾರ್ಥನಾ ಸಂಗಮದೊಂದಿಗೆ ಅಭಿಯಾನ ಸಮಾರೋಪಗೊಳ್ಳಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







