ಎಲೆಚುಕ್ಕಿ ರೋಗ: ಕೇಂದ್ರಕ್ಕೆ 225 ಕೋಟಿ ರೂ.ಗಳ ಪರಿಹಾರಕ್ಕೆ ಪ್ರಸ್ತಾವನೆ
ರಾಜ್ಯದ 7 ಜಿಲ್ಲೆಗಳಲ್ಲಿ 53, 977 ಹೆಕ್ಟೇರ್ ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಹಾನಿ

ಮಂಗಳೂರು, ಅ.5: ಕರಾವಳಿ ಹಾಗೂ ಮಲೆನಾಡಿನಲ್ಲಿ ವ್ಯಾಪಕವಾಗಿ ಅಡಿಕೆಗೆ ವ್ಯಾಪಕವಾಗಿ ಹರಡಿರುವ ಎಲೆಚುಕ್ಕಿ ರೋಗದಿಂದ ತೊಂದರೆ ಅನುಭವಿಸಿರುವ ಅಡಿಕೆ ಬೆಳೆಗಾರರಿಗೆ 225 ಕೋಟಿ ರೂ.ಗಳ ಪರಿಹಾರಕ್ಕೆ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ.
ಕರಾವಳಿ ಹಾಗೂ ಮಲೆನಾಡಿನ 7 ಜಿಲ್ಲೆಗಳಲ್ಲಿ 53,977.04 ಹೆಕ್ಟೇರ್ ಪ್ರದೇಶಗಳಲ್ಲಿರುವ ಅಡಿಕೆ ತೋಟಗಳು ಎಲೆಚುಕ್ಕಿ ರೋಗದ ಬಾಧೆಯಿಂದ ಹಾನಿಗೊಂಡಿವೆ. ಸಂತ್ರಸ್ತ ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕೆ ಕಾಸರಗೋಡಿನ ಕೇಂದ್ರೀಯ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ನೇತೃತ್ವದ ರಾಷ್ಟ್ರೀಯ ವೈಜ್ಞಾನಿಕ ಸಮಿತಿ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಡಿಕೆ ಮರದ ಹಸಿರು ಸೋಗೆಯ ಮೇಲೆ ಚಿಕ್ಕದಾಗಿ ಕಂಡು ಬರುವ ಕಂದು ಬಣ್ಣದ ಚುಕ್ಕಿ , ಬಳಿಕ ಬೇಗನೆ ವ್ಯಾಪಿಸಿ ಸೋಗೆಯು ಒಣಗುತ್ತದೆ. ಅಂತಿಮವಾಗಿ ಅಡಿಕೆ ಮರ ಸಾಯುತ್ತದೆ. ಈ ರೋಗ ಕಳೆದ ಸಾಲಿನಲ್ಲಿ ಹವಾಮಾನದ ವೈಪರಿ ತ್ಯದಿಂದಾಗಿ ಇನ್ನಷ್ಟು ಉಲ್ಬಣಗೊಂಡಿತ್ತು.
ಎಲೆಚುಕ್ಕಿ ರೋಗದಿಂದ ತೊಂದರೆಗೊಳಗಾದ ಅಡಿಕೆ ಬೆಳೆಗಾರರು ಪರಿಹಾರಕ್ಕೆ ಸರಕಾರಕ್ಕೆ ಆಗ್ರಹಿಸಿದ್ದರು. ಈ ಸಂದರ್ಭ ದಲ್ಲಿ ಕೇಂದ್ರ ಸರಕಾರವು ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ನೇತೃತ್ವದಲ್ಲಿ ಎಂಟು ಮಂದಿ ತಜ್ಞರ ಸಮಿತಿಯನ್ನು ರಚಿಸಿತ್ತು. ಎಲೆಚುಕ್ಕಿ ರೋಗ ನಿಯಂತ್ರಣ ಹಾಗೂ ಪರಿಹಾರ ಬಗ್ಗೆ ಸೂಕ್ತ ಶಿಫಾರಸ್ಸು ಮಾಡಲು ಸಮಿತಿಗೆ ಸೂಚಿಸಲಾಗಿತ್ತು.
ರಾಷ್ಟ್ರೀಯ ವೈಜ್ಞಾನಿಕ ಸಮಿತಿಯು ಎಲೆಚುಕ್ಕಿ ರೋಗ ಬಾಧಿತ ಪ್ರದೇಶಗಳಿಗೂ ಭೇಟಿ ನೀಡಿ ಅಧ್ಯಯನ ನಡೆಸಿ ಸಮಗ್ರ ವರದಿ ಸಿದ್ದಪಡಿಸಿ, ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಕೃಷಿ ಸಚಿವಾಲಯ ಹಾಗೂ ರಾಜ್ಯ ಸರಕಾರಕ್ಕೆ ಸಲ್ಲಿಸಿದೆ.
ಎರಡು ಬಾರಿ ಔಷಧಿ ಸಿಂಪಡಿಸಲು ಸಲಹೆ: ಕೊಳೆರೋಗಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣವನ್ನೇ ಎಲೆಚುಕ್ಕಿ ರೋಗ ಬಾಧಿತ ಅಡಿಕೆ ತೋಟಗಳಿಗೆ ಜೂನ್-ಆಗಸ್ಟ್ ಅವಧಿಯಲ್ಲಿ ಮೊದಲ ಹಂತದಲ್ಲಿ ಸಿಂಪಡಿಸಲು ಶಿಫಾರಸು ಮಾಡಲಾಗಿದೆ. ಎರಡನೇ ಹಂತದಲ್ಲಿ ಅಂದರೆ ಸೆಪ್ಟಂಬರ್ -ಅಕ್ಟೋಬರ್ ಅವಧಿಯಲ್ಲಿ ಪ್ರೋಪಿಕೊನಜೋಲ್ ಅಥವಾ ಟೆಬುಕೊನಜೋಲ್ ಅಥವಾ ಹೆಕ್ಸಾಕೊನಜೋಲ್‌ನ್ನು ಸಿಂಪಡಿಸುವಂತೆ ಸಲಹೆ ನೀಡಲಾಗಿದೆ.
ಅಡಿಕೆ ಮರಗಳಿಗೆ ರಾಸಾಯನಿಕ ಸಿಂಪಡಣೆ, ರೋಗ ನಿಯಂತ್ರಣ ಕುರಿತು ಪ್ರಚಾರ ಕಾರ್ಯಾಗಾರ ,ಮರಗಳಿಗೆ ಪೋಷಕಾಂಶ ನಿರ್ವಹಣೆ , ಮತ್ತಿತರ ಉದ್ದೇಶಗಳಿಗೆ ಹಣ ಒದಗಿಸಲು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ.
ಕಳೆದ ವರ್ಷ ಎಲೆಚುಕ್ಕೆ ರೋಗಕ್ಕೆ ಸಂಬಂಧಿಸಿ ತಜ್ಞರ ತಂಡ ಪರಿಶೀಲನೆ ನಡೆಸಿ ಸರಕಾರಕ್ಕೆ ಶಿಫಾರಸು ಮಾಡಿತ್ತು, ಆಗ ರಾಜ್ಯ ಸರಕಾರ ಅಡಿಕೆ ಮರಗಳಿಗೆ ರಾಸಾಯನಿಕ ಸಿಂಪಡಣೆ ಹಾಗೂ ದೋಟಿ ಖರೀದಿ ಉದ್ದೇಶಕ್ಕಾಗಿ ಅಡಕೆ ಬೆಳೆಗಾರರಿಗೆ 2 ಕೋಟಿ ರೂ. ಬಿಡುಗಡೆ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
7 ಜಿಲ್ಲೆಗಳ 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿ : ಕರಾವಳಿ ಹಾಗೂ ಮಲೆನಾಡಿನ ಒಟ್ಟು 7 ಜಿಲ್ಲೆಗಳಲ್ಲಿ ಎಲೆಚುಕ್ಕಿ ರೋಗದಿಂದಾಗಿ 3,92 504 ಹೆಕ್ಟೇರ್ ಅಡಿಕೆ ಬೆಳೆಯುವ ಪ್ರದೇಶಗಳ ಪೈಕಿ 53,977 ಹೆಕ್ಟೇರ್ ಪ್ರದೇಶಗಳಲ್ಲಿರುವ ಅಡಿಕೆ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿರುವ ಅಂಕಿ ಅಂಶಗಳ ಪ್ರಕಾರ ಚಿಕ್ಕಮಗಳೂರಲ್ಲಿ ಅತೀ ಹೆಚ್ಚು (28,788.08 ಹೆಕ್ಟೆರ್) ಹಾನಿಯಾಗಿದೆ. ಶಿವಮೊಗ್ಗ 11,950 ಹೆಕ್ಟೇರ್,ಉತ್ತರ ಕನ್ನಡ 8,604, ಉಡುಪಿ 123 ಹೆಕ್ಟೇರ್, ಕೊಡಗಿನಲ್ಲಿ 529 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.







