ಫೆ. 23: ಡಾ.ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲಗೆ ಉಳ್ಳಾಲದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಡಾ.ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ
ಮಂಗಳೂರು: ಮತ ಲೌಕಿಕ ಸಮನ್ವಯ ಶಿಕ್ಷಣ ಕೇಂದ್ರವಾದ ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ಸ್ಥಾಪಕ ಅಧ್ಯಕ್ಷರಾದ ಸಯ್ಯಿದ್ ಉಮರುಲ್ ಫಾರೂಕ್ ಅಲ್ ಬುಖಾರಿ ಪೊಸೋಟ್ ತಂಙಳ್ ಹೆಸರಿನಲ್ಲಿ ಸಮಾಜ ಸೇವಾ ಪುರಸ್ಕಾರವನ್ನು ಫೆ.23ರ ಸಂಜೆ 6.30ಕ್ಕೆ ಉಳ್ಳಾಲ ತಾಜ್ ಮಹಲ್ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು.
2000ಕ್ಕೂ ಹೆಚ್ಚು ಬಡ ಜನರಿಗೆ ಜಾತಿ ಮತ ಭೇದವಿಲ್ಲದೆ ಉಚಿತ ವಿವಾಹ ಏರ್ಪಡಿಸುವ ಮೂಲಕ ಸಮಾಜ ಸೇವೆಯಲ್ಲಿ ವಿಶಿಷ್ಟ ಸಾಧನೆಗೈದ ತಮಿಳ್ನಾಡಿನ ಧರ್ಮ ವಿದ್ವಾಂಸ, ವಾಗ್ಮಿ, ಸಮಾಜ ಸೇವಕ ಡಾ.ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ಅವರು ಪುರಸ್ಕಾರ ಸ್ವೀಕರಿಸಲಿದ್ದಾರೆ.
ಕಳೆದ ವರ್ಷ ಅವರು ಏಕ ಕಾಲದಲ್ಲಿ 400 ಜೋಡಿ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು, ಅದರಲ್ಲಿ 70 ಜೋಡಿ ಮುಸ್ಲಿಮೇತರ ಕುಟುಂಬಕ್ಕೆ ಸೇರಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಡ ಯುವತಿಯರ ವಿವಾಹ, ಬಡ ಕುಟುಂಬಗಳಿಗೆ ಗೋವು ವಿತರಣೆ, ವಿವಿಧ ಬಗೆಯ ವಿದ್ಯಾಭ್ಯಾಸ ವ್ಯವಸ್ಥೆಗಳು ಸೇರಿದಂತೆ ಹಲವು ಶೈಕ್ಷಣಿಕ, ಜನ ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿರುವ ಡಾ.ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ರವರ ಸೇವೆಯನ್ನು ಪರಿಗಣಿಸಿ ಮದ್ರಾಸ್ ಯುನಿವರ್ಸಿಟಿಯು ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿತ್ತು.
ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಈನುಸುನ್ನಾ ಅಕಾಡೆಮಿ ಹಾವೇರಿಯ ಅಧ್ಯಕ್ಷ ಸಯ್ಯಿದ್ ಶಹೀರ್ ಅಲ್ ಬುಖಾರಿ ಪೊಸೋಟ್ ಅಧ್ಯಕ್ಷತೆ ವಹಿಸುವರು. ವಿಧಾನ ಸಭಾಧ್ಯಕ್ಷ ಯು ಟಿ ಖಾದರ್, ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ, ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಮತ್ತಿತರ ಪ್ರಮುಖರು ಭಾಗವಹಿಸಲಿದ್ದಾರೆ.







