ಸೊಳ್ಳೆ ನಾಶ ಮಾಡುವ ಸಾಧನ ಅಭಿವೃದ್ಧಿಗೆ ‘ಮೊಝಿಕ್ವಿಟ್ʼ ಸಂಸ್ಥೆಗೆ ರಾಜ್ಯ ಸರಕಾರದಿಂದ 23 ಲಕ್ಷ ರೂ. ಅನುದಾನ

ಮಂಗಳೂರು: ಮಾರಣಾಂತಿಕ ರೋಗಗಳಿಗೆ ಕಾರಣವಾಗಿರುವ ಸೊಳ್ಳೆಗಳನ್ನು ಕೊಲ್ಲುವ ‘ಮೊಝಿ ಕ್ವಿಟ್’ನ್ನು ಆವಿಷ್ಕಾರ ಮಾಡಿರುವ ಮಂಗಳೂರಿನ ಕೊಟ್ಟಾರದ ಓರ್ವಿನ್ ನೊರೊನ್ಹಾ ಅವರಿಗೆ ತನ್ನ ಆವಿಷ್ಕಾರವನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಕರ್ನಾಟಕ ಸರಕಾರವು 23 ಲಕ್ಷ ರೂ. ಅನುದಾನ ನೀಡಿದೆ.
ರಾಜ್ಯ ಸರಕಾರದ ನವೀನ ನವೋದ್ಯಮಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಎಲಿವೇಟ್ 2024-25ರಲ್ಲಿ ‘ಮೊಝಿಕ್ವಿಝ್ ಸೊಲ್ಯೊಷನ್ಸ್ ಎಲ್‌ಎಲ್‌ಪಿ ಸಂಸ್ಥೆಯ ಓರ್ವಿನ್ ನೊರೊನ್ಹಾ ಅವರಿಗೆ ಸರಕಾರದಿಂದ ಅನುದಾನ ಮತ್ತು ಪ್ರಮಾಣ ಪತ್ರ ದೊರಕಿದೆ. ಮೊಝಿ ಕ್ವಿಟ್ ಸೊಳ್ಳೆಯನ್ನು ನಾಶ ಮಾಡುವ ಸಾಧನ ವಾಗಿ ಪ್ರಸಿದ್ಧಿಯನ್ನು ಪಡೆದಿದೆ.
ಇಗ್ನೀಶಿಯಸ್ ಓರ್ವಿನ್ ನೊರೊನ್ಹಾ ಅವರು ಮನೆಗಳಲ್ಲಿ ತುಂಬಿರುವ ಸೊಳ್ಳೆಗಳನ್ನು ಮತ್ತು ದನಕರು ಗಳಿಗೆ ಹಟ್ಟಿಯಲ್ಲಿ ಹಿಂಸಿಸುವ ಸೊಳ್ಳೆಗಳನ್ನು ತನ್ನತ್ತ ಆಕರ್ಷಿಸಿ ಅವುಗಳನ್ನು ನಿರ್ಮೂಲನೆ ಮಾಡುವ ಎರಡು ವಿಧದ ಸಾಧನ(ಯಂತ್ರ)ಗಳನ್ನು ಕಂಡು ಹುಡುಕಿದ್ದಾರೆ.
ಓರ್ವಿನ್ ನೊರೊನ್ಹಾ ಅವರು ಸೊಳ್ಳೆಯಿಂದ ಹರಡುವ ರೋಗಗಳ ಬಗ್ಗೆ ಮತ್ತು ಸೊಳ್ಳೆಗಳನ್ನು ನಾಶ ಮಾಡುವ ಸಾಧನದ ಜನಜಾಗೃತಿಯನ್ನು ಮೂಡಿಸುವ ಅಭಿಯಾನ ಈಗಾಲೇ ಆರಂಭಿಸಿದ್ದಾರೆ.
ಜನರನ್ನು ಹೆಚ್ಚಾಗಿ ಮಳೆಗಾಲದಲ್ಲಿ ಕಾಡುವ ಸೊಳ್ಳೆಗಳಿಂದ ಹರಡುವ ಡೆಂಗ್ಯು, ಮಲೇರಿಯಾದಂತಹ ರೋಗಗಳು ಬಾಧಿಸುವುದನ್ನು ತಡೆಗಟ್ಟಲು ಓರ್ವಿನ್ ಅವರು ರಾಸಾಯನಿಕ ಮುಕ್ತ ಸಾಧನವನ್ನು ಕಂಡು ಹಿಡಿದಿದ್ದಾರೆ.
ತನ್ನ ಅಮ್ಮನಿಗೆ ಫೈಲೇರಿಯಾಸಿಸ್‌ಗೆ ಸೊಳ್ಳೆ ಕಚ್ಚಿದ್ದೆ ಕಾರಣ ಎಂಬುದನ್ನು ಅರಿತುಕೊಂಡಿದ್ದ ಓರ್ವಿನ್ ನೊರೊನ್ಹಾ ಅವರು ಚಿಕ್ಕಂದಿನಲ್ಲೇ ಸೊಳ್ಳೆ ನಿರ್ಮೂಲನೆ ಮಾಡುವ ಯಂತ್ರ ಕಂಡು ಹಿಡಿಯುವ ಕನಸು ಕಂಡಿದ್ದರು.
2001ರಲ್ಲಿ ಹೈದರಾಬಾದ್‌ನಲ್ಲಿ ಅಮೆರಿಕದ ಮೊಸ್ಕಿಟೋ ಮ್ಯಾಗ್ನೆಟ್ ಎಂಬ ಯಂತ್ರವನ್ನು ನೋಡಿದ್ದರು. ಆದರೆ ಅದು ದುಬಾರಿಯಾಗಿತ್ತು. 1.10 ಲಕ್ಷ ರೂ. ಮೌಲ್ಯದ ಈ ಸಾಧನದ ನಿರ್ವಹಣೆಗೆ ಪ್ರತಿ ತಿಂಗಳು ಕನಿಷ್ಠ 5 ಸಾವಿರ ರೂ. ಅಗತ್ಯ. ಇದು ಜನಸಾಮಾನ್ಯರಿಗೆ ಸುಲಭವಾಗಿ ಕೈಗೆಟಕುವ ವಸ್ತುವಲ್ಲ ಎಂಬ ವಿಚಾರವನ್ನು ಅರಿಕೊಂಡ ಓರ್ವಿನ್ ಕಡಿಮೆ ವೆಚ್ಚದಲ್ಲಿ ಸೊಳ್ಳೆ ಸೆರೆ ಹಿಡಿದು ಅವುಗಳ ನಿರ್ಮೂಲನೆ ಮಾಡುವ ಸಾಧನವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಸೊಳ್ಳೆಗಳನ್ನು ಆಕರ್ಷಿಸುತ್ತದೆ: ಪ್ಲಾಸ್ಟಿಕ್‌ನಿಂದ ಮಾಡಲಾಗಿರುವ ಮೊಝಿ ಕ್ವಿಟ್‌ಗೆ ಯಾವುದೇ ಲಿಕ್ವಿಡ್ ಹಾಕಬೇಕಾಗಿಲ್ಲ. ಬೇಕಾದಷ್ಟು ಪುಡಿಯನ್ನು ಈ ಸಾಧನವನ್ನು ತಯಾರಿಸುವಾಗಲೇ ತುಂಬಿಸಲಾಗಿದೆ. ಸುಮಾರು 10 ವರ್ಷಗಳಿಗೆ ಪುಡಿ ಸಾಕಾಗಬಹುದು. ವಿದ್ಯುತ್ ಚಾಲಿತ ಈ ಸಾಧನದಲ್ಲಿ ತುಂಬಿಸಲು ಫುಡ್‌ಗ್ರೇಡ್ ಪುಡಿಯನ್ನು ಓರ್ವಿನ್ ಅವರೇ ಆವಿಷ್ಕಾರ ಮಾಡಿದ್ದಾರೆ. ಮೊಝಿ ಕ್ವಿಟ್ ಒಳಗಿರುವ ಮೋಟಾರ್ ಹೊರಸೂಸುವ ಬೆಳಕು ಸೊಳ್ಳೆಗಳನ್ನು ತನ್ನತ್ತ ಆಕರ್ಷಿಸುತ್ತದೆ. ಮೋಟಾರ್ ಫ್ಯಾನ್ ಸೊಳ್ಳೆಯನ್ನು ತನ್ನತ್ತ ಸೆಳೆದುಕೊಂಡು ಕಂಟೈನರ್‌ನಲ್ಲಿ ತುಂಬಿಸಿಕೊಳ್ಳುತ್ತದೆ. ಅಲ್ಲಿ ಹೊರಬರಲಾರದೆ ಸೊಳ್ಳೆ ಸಾಯುತ್ತದೆ ಎಂದು ಓರ್ವಿನ್ ಹೇಳುತ್ತಾರೆ.
ಕೇವಲ 10 ಪೈಸೆಯ ವಿದ್ಯುತ್ ಖರ್ಚು: ಸೊಳ್ಳೆ ನಿರ್ಮೂಲನ ಮಾಡುವ ಎರಡು ರೀತಿಯ ಸಾಧನಗಳು ಈಗ ಲಭ್ಯವಿದೆ. ಮನೆಯೊಳಗಿನ ಸೊಳ್ಳೆ ನಿರ್ಮೂಲನೆ ಮಾಡುವ ಮೊಝಿಕ್ವಿಟ್ ಮಿನಿ 3 ಪಿನ್ ಇದರ ದರ 1500 ರೂ, ದಿನಕ್ಕೆ ತಗಲುವ ವಿದ್ಯುತ್ ಖರ್ಚು ಕೇವಲ 10 ಪೈಸೆ ಆಗಿದೆ. ಹಾಗೆಯೇ ಜಾನುವಾರು ಗಳ ಹಟ್ಟಿಯಲ್ಲಿ ಬಳಕೆಗೆ ಇರುವ ‘ಮೊಝಿಕ್ವಿಟ್ ಮ್ಯಾಕ್ಸ್ ’ ದರ 3 ಸಾವಿರ ರೂ. ಆಗಿದೆ. ದಿನಕ್ಕೆ ವಿದ್ಯುತ್ ಖರ್ಚು 25 ಪೈಸೆಯದ್ದು ಎಂದು ಓರ್ವಿನ್ ಹೇಳುತ್ತಾರೆ.
ಹಟ್ಟಿಯಲ್ಲಿ ಈ ಸಾಧನವನ್ನು ಬಳಕೆಮಾಡುವುದರಿಂದ ದನದ ಹಾಲಿನ ಇಳುವರಿ ಮತ್ತು ದನದ ತೂಕ ಜಾಸ್ತಿಯಾಗಿರುವುದು ದೃಢಪಟ್ಟಿದೆ ಎಂದು ಬೀದರ್‌ನ ಕೆವಿಎವಿಎಸ್ ವಿಶ್ವವಿದ್ಯಾನಿಲಯವು ತನ್ನ ವರದಿಯಲ್ಲಿ ತಿಳಿಸಿದೆ ಎಂದು ಓರ್ವಿನ್ ತಿಳಿಸಿದ್ದಾರೆ.
ಸಂಪರ್ಕ ವಿಳಾಸ: ‘ಮೊಝಿಕ್ವಿಝ್ ಸೊಲ್ಯೊಷನ್ಸ್ ಎಲ್‌ಎಲ್‌ಪಿ , ಇನ್ಫೊಸಿಸ್ ಎದುರುಗಡೆ ಕೊಟ್ಟಾರ, ಮಂಗಳೂರು ಮೊಬೈಲ್ 9886675656.







