ಸೋಮೇಶ್ವರ ಪುರಸಭೆ ಚುನಾವಣೆ: 23 ಸ್ಥಾನಗಳಿಗೆ 50 ಅಭ್ಯರ್ಥಿಗಳು

ಉಳ್ಳಾಲ: ಡಿಸೆಂಬರ್ 27ರಂದು ಸೋಮೇಶ್ವರ ಪುರಸಭೆ 23 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆಯುವ ಕಾರ್ಯ ಮುಗಿದಿದ್ದು, 50 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್ ನಿಂದ 22, ಬಿಜೆಪಿ ಯಿಂದ 23, ಸಿಪಿಐಎಂ 2, ಆಮ್ ಆದ್ಮಿ 1 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿ ಗಳು ಕಣಕ್ಕಿಳಿದಿದ್ದಾರೆ. ಬಿಜೆಪಿ. ಭದ್ರಕೋಟೆ ಆಗಿರುವ ಸೋಮೇಶ್ವರ ದಲ್ಲಿ ಈ ಬಾರಿ ಯಾವ ಎಷ್ಟು ಸ್ಥಾನ ಗಳು ಪಡೆಯಬಹುದು ಎಂಬ ಕುತೂಹಲ ಮತದಾರರಲ್ಲಿ ಮನೆ ಮಾಡಿದೆ. ಬಿಜೆಪಿ ಈ ಬಾರಿ ಅತ್ಯಧಿಕ ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಎಂದು ಪಟ್ಟು ಹಿಡಿದಿದ್ದು, ಈಗಾಗಲೇ ಅಭ್ಯರ್ಥಿ ಗಳು ಮತಯಾಚನೆ ಕಾರ್ಯ ದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಸರಿಸಾಟಿಯಾಗಿ ಕಾಂಗ್ರೆಸ್ ವಿವಿಧ ಪ್ರಣಾಳಿಕೆ ಮುಂದಿಟ್ಟುಕೊಂಡು ಮತಯಾಚನೆ ಯಲ್ಲಿ ತೊಡಗಿವೆ. ಇವೆರಡೂ ಪಕ್ಷಗಳಿಗೆ ಸೆಡ್ಡು ಹೊಡೆಯಲು ಆಮ್ ಆದ್ಮಿ, ಸಿಪಿಐಎಂ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿ ಗಳು ಕಣದಲ್ಲಿ ಇದ್ದು, ಭಾರಿ ಪೈಪೋಟಿ ಮುಂದುವರಿದಿದೆ.
ವಿವಿಧ ಕಾರಣಗಳಿಂದ ರಾಜ್ಯದ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ತೆರವಾದ, ಖಾಲಿ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗವು ಉಪ ಚುನಾವಣೆ ನಡೆಸಲು ಆದೇಶಿಸಿದ ಹಿನ್ನೆಲೆಯಲ್ಲಿ ಸೋಮೇಶ್ವರ ಪುರಸಭೆಗೆ ಬರೋಬ್ಬರಿ ನಾಲ್ಕು ವರುಷದ ಬಳಿಕ ಚುನಾವಣೆ ನಡೆಯುತ್ತಿದೆ.
61 ಸದಸ್ಯ ಬಲವಿದ್ದ ಸೋಮೇಶ್ವರ ಗ್ರಾಮ ಪಂಚಾಯಿತಿ 2019 ರ ಜೂನ್ ತಿಂಗಳಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರಿದ ಐದೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಸಹಜವಾಗಿ ಮೊಟಕುಗೊಂಡಿತ್ತು. ಅಂದಿನಿಂದ ಸೋಮೇಶ್ವರ ಪುರಸಭೆಗೆ ಚುನಾವಣೆ ನಡೆದಿಲ್ಲ.
ಇದೀಗ ರಾಜ್ಯ ಚುನಾವಣಾ ಆಯೋಗವು ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಿಗೆ ಉಪ ಚುನಾವಣೆ ನಡೆ ಸಲು ಆದೇಶಿಸಿದ ಹಿನ್ನೆಲೆಯಲ್ಲಿ ಡಿ.27 ರಂದು ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಮತ ಎಣಿಕೆ ನಡೆಯಲಿದೆ. ಬಿಇಒ ಈಶ್ವರ್, ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಅಡಿಗ ಚುನಾವಣಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.







