ಎ. 24: ಕಾಪುವಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ
ಕಾಪು : ಬಿಜೆಪಿಯ ದಮನಕಾರಿ ಪ್ರವೃತ್ತಿಯ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲೆಯ ಪಕ್ಷದ ವಿವಿಧ ಘಟಕಗಳ ಸಹಭಾಗಿತ್ವದಲ್ಲಿ ಎಪ್ರಿಲ್ 24 ರಂದು ಕಾಪುವಿನಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಲೆ ಏರಿಕೆ, ನ್ಯಾಷನಲ್ ಹೆರಾಲ್ಡ್ ಬಗ್ಗೆ ಕೇಂದ್ರ ನೀತಿ ಹಾಗೂ ವಕ್ಫ್ ಕಾಯ್ದೆ ವಿರುದ್ಧ ನಡೆಸುವ ಈ ಪ್ರತಿಭಟನೆಗೆ ಪಕ್ಷದ ನಾಯಕರು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. 24ರ ಬೆಳಿಗ್ಗೆ 10:30ರಿಂದ ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಳದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಕಾಪು ಪೇಟೆಗೆ ಸಾಗಿ ಪ್ರತಿಭಟನಾ ಸಭೆಯು ಜರಗಲಿದೆ.
ಕೇಂದ್ರ ಸರಕಾರದಿಂದ ಗ್ಯಾಸ್, ಡಿಸೇಲ್ ಸಹಿತ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಮಸ್ಯೆ ಆಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ರಕ್ತ ಹೀರುವ ಕೆಲಸ ಮಾಡುತ್ತಿದೆ.
ಸ್ವಾತಂತ್ರ ಸಂಗ್ರಾಮ ಸಮಯದಲ್ಲಿ ಆರಂಭಗೊಂಡ ನ್ಯಾಷನಲ್ ಹೆರಾಲ್ಡ್ ಏಕಾಏಕಿ ಕಾಂಗ್ರೆಸ್ ಪಕ್ಷದ ಧ್ವನಿಯನ್ನು ದಮನ ಮಾಡುವ ಉದ್ದೇಶದಿಂದ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಕ್ಷದ ಮುಖಂಡರ ಮೇಲಿನ ಚಾರ್ಜ್ ಶೀಟ್ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ. ವಕ್ಫ್ ಕಾಯ್ದೆ ಸಂವಿಧಾನ ಬಾಹಿರಾವಾಗಿದೆ. ಈ ಬಗ್ಗೆ ವಕ್ಫ್ ಕಾಯಿದೆಗೂ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಕೇಂದ್ರದ ಈ ಎಲ್ಲಾ ನೀತಿಯನ್ನು ವಿರೋಧಿಸಿ ವಾಸ್ತವ ವಿಚಾರಗಳನ್ನು ಜನರ ಗಮನಕ್ಕೆ ತರುವ ಕಾರ್ಯ ನಾವು ಮಾಡುತ್ತಿದ್ದೇವೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಜನಾಕ್ರೋಶದ ಮೂಲಕ ಬಿಜೆಪಿ ನಾಯಕರು ರಾಜ್ಯಾದ್ಯಂತ ಸುತ್ತುತ್ತಿದ್ದಾರೆ. ಇದು ಜನಾಕ್ರೋಶವೋ ಅಥವಾ ಯತ್ನಾಳ್ ರನ್ನು ಹೊರಗಡೆ ಹಾಕಿದ ಬಗ್ಗೆ ಸಂಭ್ರಮೋಲ್ಲಾಸವೋ ತಿಳಿಯದು. ಜನಾಕ್ರೋಶ ಪ್ರಾರಂಭ ಮಾಡಿದಂದೆ ಕೇಂದ್ರ ಗ್ಯಾಸ್‍ಗೆ ರೂ.50 ಮತ್ತು ಡೀಸೆಲ್ ರೂ. 2 ಹೆಚ್ಚಿಸಿದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ರಾಜ್ಯದ ಜನಪರ ಪಂಚಗ್ಯಾರಂಟಿ ಯೋಜನೆಯು ಬಿಜೆಪಿ ಪಕ್ಷಕ್ಕೆ ಸಹಿಸಲಾಗುವುದಿಲ್ಲ. ಕೇಂದ್ರ ನಾಯಕರ ಆದೇಶದಂತೆ ಬಿಜೆಪಿಯ ದಮನಿಸುವ ಕಾರ್ಯದ ವಿರುದ್ಧ ಕಾಪುವಿನಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳ ಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಶೈಕ್ಷಣಿಕ, ಸಾಮಾಜಿಕ ಸತ್ಯಾಶಂ ಬೆಳಕಿಗೆ
ಯಾವುದೇ ಕಾರ್ಯಕ್ರಮ ಅನುಷ್ಠಾನ ಮಾಡಬೇಕಾದರೆ ನಿಖರವಾದ ಮಾಹಿತಿ ಬೇಕಾಗುತ್ತದೆ. ಜಾತಿಗಣತಿ ಸಮೀಕ್ಷೆಯೊಂದಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸತ್ಯಾಂಶ ಬೆಳಕಿಗೆ ಬರುತ್ತದೆ. ಈ ಬಗ್ಗೆ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಈಗಾಗಲೇ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಇನ್ನಷ್ಟು ವಿಮರ್ಶೆ ಆಗಲಿದೆ. ಯಾವುದೇ ವಿಧಾನದ ಆಶಯಗಳು ಆಗಬೇಕಿದ್ದರೆ ನಿಖರವಾದ ಮಾಹಿತಿ ಇರಬೇಕಾ ಗುತ್ತದೆ. ಯಾರಿಗೂ ಅನ್ಯಾಯವಾಗದೆ ಪಾರದರ್ಶಕವಾಗಿ ಆದಷ್ಟು ಬೇಗನೇ ವರದಿ ಬರಲಿದೆ ಎಂದು ವಿನಯಕುಮಾರ್ ಸೊರಕೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
2011ರಲ್ಲಿ ಆಗಿದ್ದ ಜನಗಣತಿ 2021ರಲ್ಲಿ ಆಗಬೇಕಿತ್ತು. ಆದರೆ 2025 ಆದರೂ ಜನಗಣತಿ ಆಗಿಲ್ಲ. ಈ ಬಗ್ಗೆ ಬಿಜೆಪಿಯವರು ಸ್ಪಷ್ಟಪಡಿಸಲಿ. ಶೇ. 10ರಷ್ಟು ಕೇಂದ್ರ ಸರ್ಕಾರ ಮೀಸಲಾತಿ ತಂದರೂ ಯಾವ ಸಮೀಕ್ಷೆ ಆಧಾರದಲ್ಲಿ ಮೀಸಲಾತಿ ತರಲಾಯಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಸಿದು ಬೇರೆ ಜಾತಿಗೆ ಕೊಡಲಾಗಿತ್ತು. ಈ ವೇಳೆ ಸಮೀಕ್ಷೆ ಆಗಿತ್ತಾ. ಯಾವುದೇ ಸಮೀಕ್ಷೆಯೂ ಆಗಲಿಲ್ಲ ಎಂದು ನುಡಿದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶರ್ಫುದ್ದೀನ್ ಶೇಖ್, ಇಂಟೆಕ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಪ್ರಚಾರ ಸಮಿತಿಯ ಜಿತೇಂದ್ರ ಪುರ್ಟಾಡೋ, ಕಾಪು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ನಿಯಾಝ್ ಪಡುಬಿದ್ರಿ, ಮಹಿಳಾ ವಿಭಾಗದ ಅಧ್ಯಕ್ಷೆ ಶಾಂತಲತಾ, ಪಕ್ಷದ ಮುಖಂಡ ಮಹಾಬಲ ಕುಂದರ್ ಉಪಸ್ಥಿತರಿದ್ದರು.