ಜು. 25-27: ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮೇಳನ ಮುಲ್ಲರ್ ಸಿಲ್ವರ್‌ಕಾನ್

ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜು.25ರಿಂದ 27ರ ತನಕ ಮೂರು ದಿನಗಳ ಶೈಕ್ಷಣಿಕ ಹಬ್ಬ ಮುಲ್ಲರ್ ಸಿಲ್ವರ್‌ಕಾನ್ ನಡೆಯಲಿದೆ ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಆಂಟೋನಿ ಸಿಲ್ವನ್ ಡಿ ಸೋಜ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಮೊದಲ ದಿನ ವಿವಿಧ ವಿಷಯಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ. ಸಂಶೋಧನಾ ಬರಹ ಮತ್ತು ಮೌಲ್ಯಮಾಪನ, ಉತ್ತಮ ರಸಪ್ರಶ್ನೆ ಕೌಶಲ್ಯ ಬೆಳೆಸಿಕೊಳ್ಳುವುದು, ವಿಪತ್ತು ನಿರ್ವಹಣೆ, ಸಿಮ್ಯುಲೇಶನ್ ಉಪಯೋಗಿಸಿ ಮೂಲಭೂತ ಶಸ್ತ್ರ ಚಿಕಿತ್ಸಾ ಕೌಶಲ್ಯವನ್ನು ಕಲಿಯುವುದು, ಹೃದಯ ಬಡಿತವನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಕಲೆ ಮತ್ತು ಇ ಸಿ ಜಿ ಪರೀಕ್ಷೆ, ಅಪರಾಧ ಪತ್ತೆಯಲ್ಲಿ ಉಪಯೋಗಿಸುವ ಫೋರೆನ್ಸಿಕ್ ತಂತ್ರಗಳು, ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ರೇಡಿಯಾಲಜಿ ಪರೀಕ್ಷೆಗಳ ಮಹತ್ವ ಇಂತಹ ಪ್ರಮುಖ ಮತ್ತು ಆಸಕ್ತಿದಾಯಕ ವಿಷಯಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ ಎಂದರು.
ಜು.26ರಂದು ಸಮ್ಮೇಳನದ ಉದ್ಘಾಟನೆ ಫಾದರ್ ಮುಲ್ಲರ್ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಮಣಿಪಾಲ ವಿಶ್ವವಿದ್ಯಾಲಯದ ಸಲಹೆಗಾರ ಮತ್ತು ರಕ್ಷಣಾ ಸಂಶೋಧನಾ ಸಂಸ್ಥೆಗಳ ಹಿಂದಿನ ನಿರ್ದೇಶಕ ಪ್ರೊ.ಲಾಜರ್ ಮ್ಯಾಥ್ಯೂ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ. ಫಾ. ರಿಚರ್ಡ್ ಕುವೆಲ್ಲೊ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಸರಾಂತ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ತಜ್ಞ ಡಾ.ರಣದೀಪ್ ಗುಲೇರಿಯಾ, ಡಾ.ಅವಿನಾಶ್ ಸೂಪೇ, ಡಾ.ಸಚ್ಚಿದಾನಂದ, ಡಾ.ಸುನಿಲ್ ರೈನಾ, ಡಾ.ಶ್ರೀಪಾದ್ ಪಾಟೀಲ್, ಡಾ.ತನು ಆನಂದ್, ಡಾ.ಆಶಿಕ್, ಡಾ.ಅಶೋಕ ಶೆಣೈ, ಡಾ. ಅನಿಮೇಶ್ ಜೈನ್, ಡಾ.ಮಾಲ್ಕಮ್ ಇವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ವೈದ್ಯಕೀಯ ಶಿಕ್ಷಣ, ಸಂಶೋಧನೆಗೆ ಸಂಬಂಧಪಟ್ಟ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಇದರ ಜೊತೆಗೆ, ಸಂಶೋಧನಾ ವಿಷಯಗಳು ಮತ್ತು ಸವಾಲುಗಳು ಎಂಬ ವಿಚಾರವಾಗಿ ಚರ್ಚೆಯು ನಡೆಯಲಿದೆ ಎಂದು ಹೇಳಿದರು.
ವೈದ್ಯಕೀಯ ಪದವಿ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ . ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳ ಸಮಾಗಮವಾಗಲಿರುವ ಸಂಶೋಧನಾ ವಿಷಯಗಳ ಮಂಡನೆಯ ಸ್ಪರ್ಧೆ, ವೈದ್ಯಕೀಯ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.
ಮೂರು ದಿನಗಳ ಶೈಕ್ಷಣಿಕ ಸಮ್ಮೇಳನವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಅನುಭವ ನೀಡಲಿದೆ. ದೇಶದಾದ್ಯಂತದ ಸುಮಾರು 500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಫಾದರ್ ಅಗಸ್ಟಸ್ ಮುಲ್ಲರ್ ಅವರಿಂದ 1880ರಲ್ಲಿ ಸ್ಥಾಪನೆಗೊಂಡ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ನೀಡುತ್ತಾ ಬಂದಿವೆ. ಫಾದರ್ ಮುಲ್ಲರ್ ವೈದ್ಯಕೀಯ ಮಹಾ ವಿದ್ಯಾಲಯವು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ವಿಭಾಗದಲ್ಲಿ ಉತ್ತಮ ಹೆಸರು ಹೊಂದಿದ್ದು, ವೈದ್ಯಕೀಯ ಪದವಿ ಶಿಕ್ಷಣದ ಬೆಳ್ಳಿ ಹಬ್ಬವನ್ನು ಈ ವರುಷ ಆಚರಿಸುತ್ತಿದೆ ಎಂದು ಹೇಳಿದರು.
ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ರಮೇಶ್ ಭಟ್ ಮತ್ತು ಸಂಘಟನಾ ಕಾರ್ಯದರ್ಶಿ ಡಾ.ಶಿವಶಂಕರ ಎ.ಆರ್. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







