ಫೆ. 25-27: ಡಿವೈಎಫ್‍ಐ 12ನೇ ರಾಜ್ಯ ಸಮ್ಮೇಳನ

ಉಳ್ಳಾಲ: ಡಿವೈಎಫ್ ಐನ 12ನೇ ಕರ್ನಾಟಕ ರಾಜ್ಯ ಸಮ್ಮೇಳನ ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ ಫೆ.25,26,27 ರಂದು ಉಳ್ಳಾಲದ ಕಲ್ಲಾಪು ಬಳಿಯ ಯುನಿಟಿ ಸಭಾಂಗಣದಲ್ಲಿ ಜರಗಲಿದೆ ಎಂದು ಡಿವೈಎಫ್‍ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್‍ನಲ್ಲಿ ಆಯೋಜಿಸಲಾದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣ ಎದುರಾಗಿ, ಉದ್ಯೋಗ ಮತ್ತು ಆರೋಗ್ಯದ ಹಕ್ಕುಗಳಿ ಗಾಗಿ, ಕುಡಿಯುವ ನೀರಿನ ಖಾಸಗೀಕರಣದ ವಿರುದ್ಧ ದ..ಕ ಜಿಲ್ಲೆಯ ಬೃಹತ್ ಕೈಗಾರಿಕೆಗಳು ಇಲ್ಲಿನ ನೆಲ, ಜಲ, ಪರಿಸರವನ್ನು ಮಾಲಿನ್ಯಗೊಳಿಸುವುದರ ವಿರುದ್ಧ ಸುರತ್ಕಲ್ ಅಕ್ರಮ ಟೋಲ್ ಗೇಟಿನ ತೆರವಿಗಾಗಿ ಅನೇಕ ಹೋರಾಟ ಗಳನ್ನು ನಡೆಸಿದೆ. ಪ್ರಜಾಪ್ರಭುತ್ವ ಪ್ರೇಮಿ ಸಂಘಟನೆ ಡಿವೈಎಫ್ ಐ ಕರ್ನಾಟಕ ರಾಜ್ಯ ಸಮ್ಮೇಳನ ಮೂರು ವರ್ಷ ಗಳಿಗೊಮ್ಮೆ ನಡೆಯಲಿದ್ದು, ಈ ಬಾರಿ ಮಂಗಳೂರಿನಲ್ಲಿ ನಡೆಸಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನ ಮೊದಲ ಎರಡು ದಿನ ಪ್ರತಿನಿಧಿ ಅಧಿವೇಶನ ನಡೆಯಲಿದ್ದು, ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ಸದಸ್ಯತ್ವದ ಆಧಾರದ ಮೇಲೆ 300 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಫೆ.25 ರಂದು ಬೆಳಿಗ್ಗೆ 10ಕ್ಕೆ ಯುನಿಟಿ ಹಾಲ್‍ನ ಪ್ರೊ. ಅಮೃತ ಸೋಮೇಶ್ವರ ವೇದಿಕೆ, ಡಾ.ವಿಠಲ್ ಭಂಡಾರಿ ಸಭಾಂಗಣ ದಲ್ಲಿ ಕಾಂ.ನಾಗೇಶ್ ಕುಮಾರ್ ನಗರದಲ್ಲಿ ನಡೆಯಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿವೈಎಫ್ ಐ ಅಖಿಲ ಭಾರತ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಕಾಂ.ಎಎ ರಹೀಮ್ ಭಾಗವಹಿಸಲಿದ್ದಾರೆ. 12ನೇ ಕರ್ನಾಟಕ ರಾಜ್ಯ ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ವಿಶ್ರಾಂತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಐಎಎಸ್ ಸ್ವಾಗತ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಿವೈಎಫ್ ಐ ಕರ್ನಾಟಕ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ವಹಿಸಲಿದ್ದಾರೆ. ಕಾರ್ಯದರ್ಶಿ ಬಸವರಾಜ್ ಪೂಜಾರ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜೇಶ್ ವೆಲ್ಲಾಟ್, ಕರ್ನಾಟಕ ರಾಜ್ಯಯ ಸಮಿತಿ ಸದಸ್ಯರಾದ ರೇಣುಕಾ ಕಹರ್ ಭಾಗವಹಿಸಲಿದ್ದಾರೆ.
ಯೂಥ್ ಮಾರ್ಚ್
ಫೆ.27ರಂದು ಸಮಾರೋಪದ ದಿನದ ಸಂಜೆ 3 ಗಂಟೆಗೆ ಕುತ್ತಾರು ಜಂಕ್ಷನ್ನಿನಿಂದ ಕಲ್ಲಾಪು ಯುನಿಟಿ ಸಭಾಂಗಣದ ಮೈದಾನದವರೆಗೆ ಯುವಜನರ ವರ್ಣರಂಜಿತ ಮೆರವಣಿಗೆ ನಡೆಯಲಿದೆ. ಸೌಹಾರ್ದತೆ ಸಾರುವ ಟ್ಯಾಬ್ಲೋಗಳು, ಡಾ.ಬಿ.ಆರ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಭಗತ್ ಸಿಂಗ್, ನಾರಾಯಣಗುರು, ಕೋಟಿ ಚೆನ್ನಯ, ಕುದ್ಮಲ್ ರಂಗ ರಾವ್, ವಸಾಹತು ಆಕ್ರಮಣದ ವಿರುದ್ಧ ಸೈನ್ಯ ಕಟ್ಟಿ ಹೋರಾಡಿದ ಟಿಪ್ಪು ಸುಲ್ತಾನನ್, ರಾಣಿ ಅಬ್ಬಕ್ಕ, ಅಮರಸುಳ್ಯ ವೀರರ ಭಾವಚಿತ್ರಗಳ ಮೆರವಣಿಗೆ ಚೆಂಡೆ, ಬ್ಯಾಂಡ್ ಸೆಟ್ ವೇಷಭೂಷಣಗಳ ಜೊತೆಗೆ ಯವಜನರ ಪಥಸಂಚಲನ ಜರಗಲಿದೆ.
ಸಮ್ಮೇಳನದ ಬಹಿರಂಗ ಸಭೆಯು ಯುನಿಟಿ ಮೈದಾನದ ಭಾಸ್ಕರ್ ಕುಂಬಳೆ ವೇದಿಕೆ,ಶ್ರೀನಿವಾಸ್ ಬಜಾಲ್ ನಗರದಲ್ಲಿ ನಡೆಯಲಿದೆ. ಪ್ರಧಾನ ಭಾಷಣಕಾರರಾಗಿ ಸಿಪಿಐಎಂ ಕೇಂದ್ರ ಸಮಿತಿಯ ಪ್ರ.ಕಾ ಕಾಂ.ಸೀತಾರಾಮ ಯೆಚೂರಿ, ಬಹು ಭಾಷಾ ಚಲನಚಿತ್ರ ನಟ ಪಪ್ರಕಾಶ್ ರೈ, ರಾಜ್ಯಸಭಾ ಸದಸ್ಯ ಹಾಗೂ ಡಿವೈಎಫ್ ಐ ಅಖಿಲ ಭಾರತ ಅಧ್ಯಕ್ಷ ಎ.ಎ ರಹೀಂ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಮೂರು ದಿನ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ನಾದಮಣಿನಾಲ್ಕೂರು ಇವರ ಏಕತಾರಿ ಹಾಡುಗಳ ಗಾಯನ, ಪಿವೈಎಂ ಟ್ರೂಪ್ಸ್ ಬಜಾಲ್ ಮತ್ತು ಸೌಹಾರ್ದ ಕಕಲಾವಿದರು ಕುತ್ತಾರು ಇವರಿಂದ ಸಾಂಸ್ಕøತಿಕ ಉತ್ಸವ, ಡಾ.ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ಅಮೃತ ಸ್ಮರಣೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಫೆ.26 ರಂದು ಬೆಳಿಗ್ಗೆ 10.30ಕ್ಕೆ ದೆಹಲಿ ಜೆಎನ್ ಯು ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಇವರಿಂದ ಕರಾವಳಿ ಕಟ್ಟಿದ ಬಗೆ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನಡೆಯಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಡಿವೈಎಫ್ ಐ ದ.ಕ ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ತಾಲೂಕು ಮಟ್ಟದ ಸ್ವಾಗತ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಬಬ್ಬುಕಟ್ಟೆ, ಕಾರ್ಯದರ್ಶಿ ರಿಝ್ವಾನ್ ಹರೇಕಳ, ಉಳ್ಳಾಲ ತಾಲೂಕು ಉಪಾಧ್ಯಕ್ಷ ರಝಾಕ್ ಮುಡಿಪು ಹಾಗೂ ಮುನ್ನೂರು ಗ್ರಾ.ಪಂ ಸದಸ್ಯ ಮಹಾಬಲ ಟಿ. ದೆಪ್ಪೆಲಿಮಾರ್ ಭಾಗವಹಿಸಿದ್ದರು.







