ಕೊಣಾಜೆ: 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಮಾಲೋಚನಾ ಸಭೆ
ಲಾಂಛನ ಅನಾವರಣ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ 27 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡದ ಕೆಲಸಗಳಿಗೆ ಸೀಮಿತವಾಗಿರದೆ ನಮ್ಮನ್ನೆಲ್ಲ ಒಗ್ಗಟ್ಟುಗೊಳಿಸುವ , ಸಮಾಜದ ಸಂಬಂಧಗಳನ್ನು ಬೆಸೆಯುವ ಊರ ಹಬ್ಬವಾಗಿ ರೂಪುಗೊಳ್ಳಲಿದೆ. ಸಮ್ಮೇಳನದ ಲಾಂಛನವು ಬಹುತ್ವಕ್ಕೆ ಸಾಕ್ಷಿಯಾಗಿ ರೂಪುಗೊಂಡು ಇಂದು ಅನಾವರಣ ಗೊಂಡಿದ್ದು, ಕನ್ನಡದ ಹಬ್ಬವು ಯಶಸ್ವಿಯಾಗಿ ನಡೆಯಲಿ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಇದರ ವತಿಯಿಂದ ಫೆ.21, 22 ರಂದು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯುವ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ನೇಳನದ ಲಾಂಛನವನ್ನು ಬಿಡುಗೊಳಿಸಿ ಅವರು ಮಾತನಾಡಿದರು.
ಕನ್ನಡದ ಮಹತ್ತರದ ಕೆಲಸಗಳಿಗೆ ಈಗಾಗಲೇ ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯು ಸಾಕ್ಷಿಯಾ ಗಿದ್ದು, ಇದೀಗ ಮಂಗಳೂರು ವಿವಿಯಲ್ಲಿ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶ್ವವಿದ್ಯಾಲಯವು ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ಅವರು ಮಾತನಾಡಿ, ಪ್ರಭಾಕರ ಶಿಶಿಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ, ಯು.ಟಿ.ಖಾದರ್ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವು ರಾಜ್ಯಕ್ಕೇ ಮಾದರಿಯಾಗಿ ನಡೆಯಲಿ ಎಂದು ಹಾರೈಸಿದರು.
ಮೂಡಾದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಸಮ್ಮೇಳನದ ಕುರಿತು ಮಾತನಾಡಿದರು.
ದ.ಕ.ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀನಾಥ್ ಹೆಗ್ಡೆ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಉಳ್ಳಾಲ ತಾಲೂಕಿನ ವಿಶ್ವವಿದ್ಯಾಲಯದಲ್ಲಿ ನಡೆಯುವ ಈ ಸಮ್ಮೇಳನವು ಮಾದರಿ ಸಮ್ಮೇಳನವಾಗಿ ರೂಪುಗೊಳ್ಳಲಿದ್ದು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಕೇಂದ್ರ ಸಮಿತಿ ಸದಸ್ಯರಾದ ಡಾ.ಮಾಧವ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಡಿ, ಕಾರ್ಯದರ್ಶಿ ರಾಜೇಶ್ವರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮ್ಮೇಳನದ ವಿವಿಧ ಸಮಿತಿಯ ಅಧ್ಯಕ್ಷರು ಹಾಗೂ ಸಂಚಾಲಕರು,ಸಂಘಟಕರು,ಸದಸ್ಯರನ್ನು ಆಯ್ಕೆ ಮಾಡಲಾಯಿತು ಹಾಗೂ ಜವಾಬ್ಧಾರಿಗಳನ್ನು ಹಂಚಲಾಯಿತು.
ಕಸಪಾ ಉಳ್ಳಾಲ ತಾಲೂಕು ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮ್ಮೇಳನದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಅವರು ಸ್ವಾಗತಿಸಿದರು. ತ್ಯಾಗಂ ಹರೇಕಳ ಅವರು ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಶರ್ಮ ಕದ್ರಿ ಶಿವಭಾಗ ಅವರು ರಚಿಸಿದ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ, ಹುಟ್ಟುದೋಣಿ, ಕೊಂಬು, ಪುಸ್ತಕ ಹಾಗೂ ಕನ್ನಡ ಧ್ವಜವನ್ನೊಳಗೊಂಡ ಆಕರ್ಷಕ ಲಾಂಛನವನ್ನು ಕುಲಪತಿಯವರು ಬಿಡುಗಡೆಗೊಳಿಸಿದರು.
ಮಂಗಳೂರು ವಿವಿಯಲ್ಲಿ ನಡೆಯುವ 27 ನೇ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನವು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಡೆಯಲಿದ್ದು, ಅಸೈಗೋಳಿಯಿಂದ ಮಂಗಳಾ ಸಭಾಂಗಣದ ವರೆಗೆ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಪುಸ್ತಕ ಪ್ರದರ್ಶನ, ಆಹಾರ ಮಳಿಗೆ, ಕರಾವಳಿಯ ಸಂಸ್ಕೃತಿಯ ನ್ನು ಬಿಂಬಿಸುವ ವಸ್ತುಪ್ರದರ್ಶನ, ಕರಕುಶಲ ,ಕೈಗಾರಿಕೆ ಸೇರಿದಂತೆ ವಿವಿಧ ಆಕರ್ಷಕ ಮಳಿಗೆಗಳು , ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ.







