ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆ|ಸೆ.28ರಂದು ಯೆಲ್ಲೋ ಅಲರ್ಟ್ ಘೋಷಣೆ

ಮಂಗಳೂರು, ಸೆ.27: ದ.ಕ.ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬಲವಾಗಿ ಬೀಸಿದ ಗಾಳಿಗೆ ಮರಗಳು ಉರುಳಿ ಬಿದ್ದಿದ್ದು, ಕೃಷಿಗೂ ಹಾನಿ ಸಂಭವಿಸಿದೆ.
ನೇತ್ರಾವತಿ, ಕುಮಾರಧಾರ, ಪಯಸ್ವಿನಿ, ಫಲ್ಗುಣಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿವೆ. ನಗರದಲ್ಲಿ ಮಳೆ ನೀರಿನೊಂದಿಗೆ ಕಸಕಡ್ಡಿಗಳು ಕೊಚ್ಚಿಕೊಂಡು ರಸ್ತೆಯಲ್ಲಿ ಶೇಖರಿಸಿದ ಪರಿಣಾಮ ಕೆಲವೆಡೆ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.
ಹವಾಮಾನ ಇಲಾಖೆಯು ಸೆ.28ರಂದು ಯೆಲ್ಲೋ ಅಲರ್ಟ್ ಘೋಷಿಸಿದೆ. ಸೆ.29ರ ತನಕ ಮೋಡ ಕವಿದ ವಾತಾವರಣ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅ.1ರಿಂದ 3ರವರೆಗೆ ಯೆಲ್ಲೋ ಅಲರ್ಟ್ ಇರಲಿದೆ. ಮಂಗಳೂರಿನಲ್ಲಿ ಶನಿವಾರ ಗರಿಷ್ಟ 26.8 ಡಿ.ಸೆ. ಹಾಗೂ ಕನಿಷ್ಟ 23.4 ಡಿ.ಸೆ. ತಾಪಮಾನ ದಾಖಲಾಗಿತ್ತು.
*ಮೀನುಗಾರರಿಗೆ ಎಚ್ಚರಿಕೆ: ಕರ್ನಾಟಕ ಕರಾವಳಿಯಲ್ಲಿ ರವಿವಾರ ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
*ವಾಹನ ದಟ್ಟಣೆ: ನಗರ ಹಾಗೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ರಾತ್ರಿಯ ವೇಳೆಗೆ ವ್ಯಾಪಕ ವಾಹನ ದಟ್ಟಣೆ ಉಂಟಾಗಿತ್ತು. ರಾ.ಹೆ. ಮತ್ತು ನಗರದ ಪ್ರಮುಖ ಹಾಗೂ ಒಳರಸ್ತೆಯ ಹಲವು ಕಡೆಗಳಲ್ಲಿ ಕಾಣಿಸಿಕೊಂಡ ಗುಂಡಿಗಳಿಗೆ ತೇಪೆ ಹಾಕಿದ್ದರೂ ಶನಿವಾರ ಸುರಿದ ಮಳೆಗೆ ಮತ್ತೆ ಗುಂಡಿ ಕಾಣಿಸಿವೆ. ಇದರಿಂದ ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸಲು ಆರಂಭಿಸಿದ ಪರಿಣಾಮ ಅಲ್ಲಲ್ಲಿ ದಟ್ಟಣೆ ಉಂಟಾಯಿತು.







