ಮನಪಾ: ಮುಂದಿನ 3 ತಿಂಗಳೊಳಗಾಗಿ ಎಲ್ಲಾ ಸ್ವತ್ತುಗಳಿಗೆ ಇ-ಖಾತೆ

ಮಂಗಳೂರು, ಫೆ.19: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ನೀಡುವುದನ್ನು ಅಭಿಯಾನದ ರೂಪದಲ್ಲಿ ಕೈಗೊಳ್ಳಲಾಗಿದ್ದು, ಮುಂದಿನ 3 ತಿಂಗಳೊಳಗಾಗಿ ಎಲ್ಲಾ ಸ್ವತ್ತುಗಳಿಗೆ ಇ-ಖಾತೆ ನೀಡಲು ಉದ್ದೇಶಿಸಲಾಗಿದೆ ಎಂದು ಮನಪಾ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಬಳಸಿ, ಇ- ಖಾತಾ ನೀಡುನ ಸೌಲಭ್ಯವನ್ನು 2022 ರಿಂದ ಜ್ಯಾರಿಗೊಳಿಸಲಾಗಿದೆ. ಈಗಾಗಲೇ 39000 ಇ- ಖಾತೆಗಳನ್ನು ಸೃಷ್ಟಿಸಿ ಆಸ್ತಿ ಮಾಲೀಕರಿಗೆ ವಿತರಿಸಲಾ ಗಿರುತ್ತದೆ. ಈವರೆಗೆ ಇ-ಆಸ್ತಿ ತಂತ್ರಾಂಶದಲ್ಲಿ ಅಧಿಕೃತ ಆಸ್ತಿಗಳಿಗೆ ಮಾತ್ರ ಇ-ಖಾತಾ ಸೃಜನೆ ಮಾಡಿ ನೀಡುತ್ತಿದ್ದು, ಯೋಜನಾ ಪ್ರಾಧಿಕಾರದಿಂದ ಅನುಮೋದನೆಯಾಗದ ನಿವೇಶನಗಳಿಗೆ ನೀಡಲಾಗಿರುವುದಿಲ್ಲ. ಈ ಸಂಬಂಧ ಸಾರ್ವಜನ ಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅನಧಿಕೃತ ನಿವೇಶನಗಳಿಗೆ ಇ-ಖಾತೆ ನೀಡಲು ಅನುಕೂಲ ವಾಗುವಂತೆ ಕರ್ನಾಟಕ ಮುನ್ಸಿಪಲ್ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಸೆ.10, 2024ರ ಪೂರ್ವದಲ್ಲಿ ನೋಂದಣಿಯಾದ ಅನಧಿಕೃತ ಸ್ವತ್ತುಗಳಿಗೆ ಇ-ಖಾತಾ ನೀಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ತಮ್ಮ ಆಸ್ತಿಯ ಇ -ಖಾತಾ ದೊರೆಯುವುದರಿಂದ ವಹಿವಾಟುಗಳನ್ನು ನಡೆಸಲು ಅನುಕೂಲವಾಗುತ್ತದೆ.
ಸಾರ್ವಜನಿಕರು ಈ ಅವಕಾಶದ ಸದುಪಯೋಗವನ್ನು ಪಡೆಯುವಂತೆ ಮನಪಾ ವಿನಂತಿಸಿದೆ.
ಇ-ಆಸ್ತಿ ತಂತ್ರಾಂಶದಲ್ಲಿ ಮತ್ತು (https://eaasthikarnataka.gov.in/office) ಆಸ್ತಿ ಕಣಜ ತಂತ್ರಾಂಶದಲ್ಲಿ (http://wasthikanaja.karnatakasmartcity.in/kmf24) ಆಸ್ತಿಗಳ ವಿವರಗಳನ್ನು ಪರಿಶೀಲಿಸಿ ದೃಢಪಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಮಹಾನಗರಪಾಲಿಕೆಯ ಕೇಂದ್ರ ವಲಯ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ನಂಬ್ರ 0824-2220302 ಹಾಗೂ 9141996736ಗೆ ಸಂಪರ್ಕಿಸಬಹುದು ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







