‘ಎಸ್‌ವೈಎಸ್ 30’ ಸಮ್ಮೇಳನ ಯಶಸ್ಸಿಗೆ ಜಂಇಯತುಲ್ ಉಲಮಾ ಕರೆ
ಮಂಗಳೂರು, ಜ.21: ಮಂಗಳೂರಿನಲ್ಲಿ 30 ವರ್ಷಗಳ ಹಿಂದೆ ರೂಪುಗೊಂಡ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಇದರ 30ನೇ ವರ್ಷಾಚರಣೆಯನ್ನು ಜ.24ರಂದು ಅಡ್ಯಾರ್ ಕಣ್ಣೂರಿನಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸುನ್ನಿ ಜಂಇಯತುಲ್ ಉಲಮಾ ಕರೆ ನೀಡಿದೆ.
ಯುವ ಜನರು ಮದ್ಯ, ಮಾದಕ ಮತ್ತಿತರ ಕೆಡುಕುಗಳ ದಾಸರಾಗಿ ದಾರಿ ತಪ್ಪುತ್ತಿರುವ, ಸಮಾಜದ್ರೋಹಿ ಚಟುವಟಿಕೆಗಳಲ್ಲಿ ತೊಡಗುತ್ತಿರುವ ಆತಂಕಕಾರಿ ಸನ್ನಿವೇಶದಲ್ಲಿ ಯುವ ಸಮುದಾಯಕ್ಕೆ ಸಜ್ಜನಿಕೆಯ ಮಾರ್ಗದರ್ಶನ ನೀಡಿ, ಅವರ ಅದಮ್ಯ ವಾದ ಯುವಶಕ್ತಿಯನ್ನು ಸಮಾಜ ಮತ್ತು ರಾಷ್ಟ್ರಕ್ಕೆ ಉಪಯುಕ್ತವಾಗುವಂತೆ ಬಳಸಿಕೊಳ್ಳುವುದಕ್ಕೆ ಎಸ್‌ವೈಎಸ್ ನಡೆಸುತ್ತಿ ರುವ ಚಟುವಟಿಕೆಗಳು ಶ್ಲಾಘನೀಯ. ಸುನ್ನೀ ಜಂಇಯತುಲ್ ಉಲಮಾದ ದೀರ್ಘಕಾಲ ಅಧ್ಯಕ್ಷರಾಗಿದ್ದ ಬೇಕಲ್ ಉಸ್ತಾದ್‌ರ ನಾಯಕತ್ವದಲ್ಲಿ ಅಸ್ತಿತ್ವಕ್ಕೆ ಬಂದ ಎಸ್‌ವೈಎಸ್ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಲು ಈ ಸಮ್ಮೇಳ ನವು ಸಹಕಾರಿಯಾಗಲಿ ಎಂದು ಜಂಇಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾರೈಸಿದರು.
ಮಾಣಿ ದಾರುಲ್ ಇರ್ಷಾದ್‌ನಲ್ಲಿ ನಡೆದ ಜಂಇಯತುಲ್ ಉಲಮಾ ಸಭೆಯಲ್ಲಿ ಕೆಪಿ ಹುಸೈನ್ ಸಅದಿ ಕೆಸಿ ರೋಡ್, ಖಾಸಿಮ್ ಮದನಿ ಕರಾಯ, ಅಬೂಸಾಲಿಹ್ ಮದನಿ ಆಲಡ್ಕ, ಅಬೂಸುಫ್ಯಾನ್ ಮದನಿ, ತೋಕೆ ಕಾಮಿಲ್ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ ಉಪಸ್ಥಿತರಿದ್ದರು. ಎಸ್‌ಪಿ ಹಂಝ ಸಖಾಫಿ ಬಂಟ್ವಾಳ ಸ್ವಾಗತಿಸಿ, ವಂದಿಸಿದರು.





