ಮನಪಾ ಸಾಮಾನ್ಯ ಸಭೆಯಲ್ಲಿ ಟಿಡಿಆರ್ ಗದ್ದಲ: ಪದವು ಗ್ರಾಮದ 3.42 ಎಕರೆ ಟಿಡಿಆರ್ ಕೈಬಿಡಲು ವಿಪಕ್ಷದ ಆಗ್ರಹ
ಪೂರ್ವಭಾವಿ ಮಂಜೂರಾತಿಗೆ ಮೇಯರ್ ಸ್ಥಿರೀಕರಣ

ಮಂಗಳೂರು, ಜ.30: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟಿಡಿಆರ್ ದಂಧೆ ನಡೆಯುತ್ತಿದೆ ಎಂಬ ಸಾರ್ವಜನಿಕ ವಲಯದ ಆರೋಪದ ನಡುವೆಯೇ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಪದವು ಗ್ರಾಮದ 3.42 ಎಕರೆ ಭೂಮಿಯ ಟಿಡಿಆರ್ ಕುರಿತಾದ ಚರ್ಚೆ ಗದ್ದಲವನ್ನೇ ಸೃಷ್ಟಿಸಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಈ ವಿಷಯ ದಲ್ಲಿ ಆರೋಪ, ಆಕ್ಷೇಪಗಳ ನಡುವೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇಯರ್ ಮನೋಜ್ ಕುಮಾರ್ ವಿಪಕ್ಷದ ಆಕ್ಷೇಪವನ್ನು ದಾಖಲಿಸಿಕೊಂಡು ಅನುಮೋದನೆಗೆ ಅಂಗೀಕಾರ ನೀಡಿದರು.
ಸಭೆಯ ಆರಂಭದಲ್ಲಿಯೇ ಮೇಯರ್ ಮನೋಜ್ ಕುಮಾರ್‌ರವರು ಪದವು ಗ್ರಾಮದ ಸರ್ವೆ ನಂ. 81A/ಅ2Aಯಲ್ಲಿನ 1.44.8 ಎಕರೆ ಹಾಗೂ ಸರ್ವೆ. ನಂ. 284A/ಅ5ರಲ್ಲಿನ 1.97.80 ಎಕರೆ ಸೇರಿ ಒಟ್ಟು 3.42.60 ಎಕರೆ ಜಾಗವನ್ನು ಟಿಡಿಆರ್ ನಿಯಮದಡಿ ಸ್ವಾಧೀನ ಪಡಿಸಲು ಮಂಜೂರಾತಿ ನೀಡುವುದಾಗಿ ಹೇಳಿದರು.
ಇದಕ್ಕೆ ಆಕ್ಷೇಪಿಸಿದ ವಿಪಕ್ಷ ನಾಯಕ ಅನಿಲ್ ಕುಮಾರ್, ಸದಸ್ಯರಾದ ಅಬ್ದುಲ್ ರವೂಫ್ ಸೇರಿದಂತೆ ವಿಪಕ್ಷ ಸದಸ್ಯರು ಯಾವ ಕಾರಣಕ್ಕೆ ಅದಕ್ಕೆ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ ಎಂದು ಪ್ರಶ್ನಿಸಿದರು.
ಸುಮಾರು ಆರು ತಿಂಗಳ ಹಿಂದೆ ಹಿಂದಿನ ಮೇಯರ್‌ರವರು ಈ ಪ್ರಕರಣದಲ್ಲಿ ಪೂರ್ವಭಾವಿ ಮಂಜೂರಾತಿ ನೀಡಿದ್ದರೂ ಆಕ್ಷೇಪದ ಕಾರಣಕ್ಕೆ ಮುಂದೂಡಿಕೆ ಮಾಡಿದ್ದರು. ಆ ಸಂದರ್ಭ ಆಡಳಿತ ಪಕ್ಷದ ಸದಸ್ಯರೊಬ್ಬರು ಕೂಡಾ ಆಕ್ಷೇಪಿಸಿದ್ದರು. ಹಾಗಿದ್ದರೂ ಇದೀಗ ಮತ್ತೆ ಹೊಸ ಮೇಯರ್‌ರವರು ಪೂರ್ವಭಾವಿ ಅನುಮೋದನೆ ನೀಡಿ ಸ್ಥಿರೀಕರಣ ನೀಡಿರುವುದು ಯಾವ ಕಾರಣಕ್ಕೆ ಎಂದು ಸದಸ್ಯ ಅಬ್ದುಲ್ ರವೂಫ್ ಪ್ರಶ್ನಿಸಿದರು.
ಪೂರ್ವಭಾವಿ ಮಂಜೂರಾತಿ ನೀಡಿರುವ ಮೇಯರ್ ಸದಸ್ಯರಿಗೆ ಯಾವ ಮಾಹಿತಿಯನ್ನು ಯಾಕೆ ನೀಡಿಲ್ಲ. ಪೂರ್ವಾಗ್ರಹ ಪೀಡಿತರಾಗಿ ಈ ಮಂಜೂರಾತಿ ಯಾಕೆ ನೀಡಿರುವುದು. ಪಾಲಿಕೆ ಆಡಳಿತ ಟಿಡಿಆರ್ ದಂಧೆ ನಡೆಸುತ್ತಿದೆಯೇ ಎಂದು ಸದಸ್ಯ ವಿನಯರಾಜ್ ಪ್ರಶ್ನಿಸಿದರು.
ಈ ಸಂದರ್ಭ ಕೆಲಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ಉಂಟಾದಾಗ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಈ ಕಾರ್ಯಸೂಚಿ ಕೈಬಿಡಬೇಕು, ಟಿಡಿಆರ್ ಅನುಮೋದನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಕಾರ್ಯಸೂಚಿ ಸ್ಥಿರೀಕರಿಸಿ ಆಗಿದ್ದು, ಕೈಬಿಡಲು ಆಗದು ಎಂದು ಮೇಯರ್ ಹೇಳಿದಾಗ, ಅಂತಹ ತುರ್ತು ಏನಿದೆ, ಹಿಂದಿನ ಮೇಯರ್ ಮುಂದೂಡಿದ್ದನ್ನು, ಆಕ್ಷೇಪ ವ್ಯಕ್ತವಾಗಿರುವ ಟಿಡಿಆರ್ ವಿಚಾರವನ್ನು ಸ್ಥಿರೀಕರಿಸಿದ್ದು ಯಾಕಾಗಿ ಎಂದು ತಿಳಿಸಿ ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದರು.
ಪೌರ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕಾಗಿ ಟಿಡಿಆರ್ ಮೂಲಕ ಸ್ವಾಧೀನ ಪಡಿಸಲಾಗಿದ್ದು, ನಗರಾಭಿವೃದ್ಧಿ ಸಚಿವರು ಮಂಗಳೂರಿನಲ್ಲಿ ಪ್ರಥಮ ಸಭೆಯ ವೇಳೆಯಲ್ಲಿಯೇ ಅಗತ್ಯವಿದ್ದಲ್ಲಿ ಟಿಡಿಆರ್ ಮೂಲಕ ಭೂಮಿ ಸ್ವಾಧೀನ ಪಡಿಸಿ ಮನೆ ನಿರ್ಮಾಣಕ್ಕೆ ಮುಂದಾಗಲು ಸೂಚನೆ ನೀಡಿದ್ದರು. ಇದೀಗ ಪೌರ ಕಾರ್ಮಿಕರ ಮನೆ ನಿರ್ಮಾಣಕ್ಕೆ ವಿಪಕ್ಷದವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಮಾಜಿ ಮೇಯರ್ ಸುಧೀರ್ ಶೆಟ್ಟಿ ಆರೋಪಿಸಿದರು.
ಈಗಾಗಲೇ ಮನಪಾದಿಂದ ಮನೆ ನಿರ್ಮಾಣಕ್ಕಾಗಿ ಸುಮಾರು 20 ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕಳೆದ ಐದು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಒಂದೇ ಒಂದು ಮನೆ ನಿರ್ಮಾಣ ಆಗಿಲ್ಲ. ಆಗ ನೆನಪಾಗದ ಪೌರ ಕಾರ್ಮಿಕರ ಬಗ್ಗೆ ಈಗ ಯಾಕೆ ನೆನಪಾಗುತ್ತಿದೆ. 3.5 ಎಕರೆ ಜಾಗ ಸ್ವಾಧೀನ ಪಡಿಸುತ್ತಿರುವುದರ ಹಿಂದಿನ ಉದ್ದೇಶ ಏನು ಎಂದು ವಿನಯರಾಜ್ ಹಾಗೂ ಶಶಿಧರ ಹೆಗ್ಡೆ ಪ್ರಶ್ನಿಸಿದರು.
ಈ ಜಾಗ ಮನೆ ನಿರ್ಮಾಣದ ಕಾರ್ಯಸಾಧ್ಯತೆಯ ವರದಿಯನ್ನು ಹೊಂದಿದ್ದರೆ ಅದರ ಕಡತ ತರಿಸಿ ವಿವರ ನೀಡಿ ಎಂದು ಶಶಿಧರ ಹೆಗ್ಡೆ ಒತ್ತಾಯಿಸಿದರು.
ಶಕ್ತಿನಗರದಲ್ಲಿ ಡೀಮ್ಡ್ ಫಾರೆಸ್ಟ್‌ನಲ್ಲಿ 930 ಜನರಿಗೆ ಹಕ್ಕುಪತ್ರ ವಿತರಿಸಿ ಅನ್ಯಾಯ ಮಾಡಿದ್ದು ಯಾರು? ಪ್ರಸಕ್ತ ರಾಜ್ಯ ಸರಕಾರದಿಂದ ಪಾಲಿಕೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ ಎಂದು ಪಾಲಿಕೆಯ ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ಹೊರಿಸಿದರೆ, ಡೀಮ್ಡ್ ಫಾರೆಸ್ಟ್ ಆಗಿದ್ದ ಜಾಗದಲ್ಲಿ 930 ಜನರಿಗೆ ವಸತಿ ನಿರ್ಮಾಣಕ್ಕಾಗಿ 125 ಕೋಟಿ ರೂ.ಗಳ ಅಗತ್ಯವಿದೆ ಎಂಬ ಪ್ರಸ್ತಾಪವನ್ನು ಇದೀಗ ರಾಜ್ಯ ಸರಕಾರಕ್ಕೆ ಪಾಲಿಕೆಯಿಂದ ಸಲ್ಲಿಸಿದ್ದು ಹೇಗೆ, ಡೀಮ್ಡ್ ಫಾರೆಸ್ಟ್ ಜಾಗ ಈಗ ಸರಿಯಾಗಿದ್ದು ಹೇಗೆ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದಾಗ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ- ಪ್ರತ್ಯಾರೋಪಗಳ ಸುರಿಮಳೆಯಾಗಿ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಮಧ್ಯ ಪ್ರವೇಶಿಸಿದ ಮೇಯರ್ ಮನೋಜ್ ಕುಮಾರ್, ಈಗಾಗೇಲ 10000 ಮಂದಿ ವಸತಿಗಾಗಿ ಕಾಯುತ್ತಿದ್ದಾರೆ. ಅದಕ್ಕಾಗಿ ಭೂಸ್ವಾಧೀನ ಅಗತ್ಯವಿದೆ ಎಂದು ಹೇಳಿದರು.
ಈಗಾಗಲೇ ಸ್ವಾಧೀನ ಪಡಿಸಿರುವ 20 ಎಕರೆ ಜಾಗದಲ್ಲಿ ಮನೆ ನಿರ್ಮಿಸುವ ವ್ಯವಸ್ಥೆಯಾಗಲಿ. ಬಳಿಕ ಬೇರೆ ಜಾಗ ಸ್ವಾಧೀನ ಪಡಿಸುವ ಬಗ್ಗೆ ಕ್ರಮವಾಗಲಿ ಎಂದು ವಿನಯರಾಜ್ ಪಟ್ಟು ಹಿಡಿದರು. ಮೇಯರ್‌ರವರು ವಿಪಕ್ಷದ ಆಕ್ಷೇಪ ದಾಖಲಿಸಿಕೊಂಡು ಟಿಡಿಆರ್ ಪೂರ್ವಭಾವಿ ಮಂಜೂರಾತಿಯನ್ನು ಸ್ಥಿರೀಕರಿಸುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪ ಮೇಯರ್ ಭಾನುಮತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣ ಮಂಗಳ, ಕದ್ರಿ ಮನೋಹರ ಶೆಟ್ಟಿ, ಸುಮಿತ್ರ, ಸರಿತಾ ಶ್ರೀಧರ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಉಪಸ್ಥಿತರಿದ್ದರು.







