ಜ. 4-6: ಯೆನೆಪೋಯ ವಿವಿಯಲ್ಲಿ ‘ಯೇನ್-ಕ್ಯಾನ್-2024’

ಮಂಗಳೂರು, ಡಿ.20: ಯೆನೆಪೋಯ ಪರಿಗಣಿಸಲ್ಪಟ್ಟ ವಿವಿ ಅಂಗವಾಗಿರುವ ನರಿಂಗಾನದ ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ವತಿಯಿಂದ ‘ಯೇನ್-ಕ್ಯಾನ್-2024’ ಎಂಬ 3 ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಜ.4ರಿಂದ 6ರವರೆಗೆ ದೇರಳಕಟ್ಟೆ ಯೆನೆಪೋಯ ವಿವಿಯಲ್ಲಿ ಆಯೋಜಿಸಲಾಗಿದೆ ಎಂದು ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲ ಡಾ. ಗುರುರಾಜ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.4ರಂದು ಬೆಳಗ್ಗೆ 10ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು, ಹೊಸದಿಲ್ಲಿಯ ಭಾರತೀಯ ವೈದ್ಯಪದ್ಧತಿಯ ರಾಷ್ಟ್ರೀಯ ಆಯೋಗ ಅಧ್ಯಕ್ಷ ವೈದ್ಯ ಜಯಂತ್ ದೇವಪೂಜಾರಿ ಉದ್ಘಾಟಿಸಲಿದ್ದಾರೆ. ಆಯುರ್ವೇದ ಮಂಡಳಿ ಅಧ್ಯಕ್ಷ ಡಾ. ಶ್ರೀನಿವಾಸ ಪ್ರಸಾದ್ ಬೂದೂರು ಅತಿಥಿಯಾಗಿ ಭಾಗವಹಿಸುವರು. ಯೆನೆಪೊಯ ವಿವಿ ಉಪಕುಲಪತಿ ಡಾ. ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಆಹ್ವಾನಿತ ಗಣ್ಯರು ಕ್ಯಾನ್ಸರ್ ಸಂಶೋಧನೆ ಹಾಗೂ ಆವಿಷ್ಕಾರಗಳು, ಕ್ಯಾನ್ಸರ್ ಹಾಗೂ ಜೀವನಶೈಲಿ, ಕ್ಯಾನ್ಸರ್ ರೋಗ ನಿರ್ಣಯ ಹಾಗೂ ನಿರ್ವಹಣೆ, ಸಂಯೋಜಿತ ಕ್ಯಾನ್ಸರ್ ಆರೈಕೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವೈಜ್ಞಾನಿಕ ವಿಷಯ ಮಂಡನೆ ಮಾಡಲಿದ್ದಾರೆ. 16 ರಾಜ್ಯದ ವಿವಿಧ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು, ಅಧ್ಯಾಪಕರು, ವೈದ್ಯರ ಸಹಿತ 500 ಮಂದಿ ಭಾಗವಹಿಸಲಿದ್ದಾರೆ. ಕ್ಯಾನ್ಸರ್ ಕ್ಷೇತ್ರದ ಎಲ್ಲಾ ಸಂಶೋಧಕರು ಹಾಗೂ ತಜ್ಞರನ್ನು ಒಂದೇ ವೇದಿಕೆಯಲ್ಲಿ ತರಲಿದ್ದು ಕ್ಯಾನ್ಸರ್ ಬಗ್ಗೆ ಸಮಗ್ರ ಜ್ಞಾನ ಒದಗಿಸಲು ಸಮ್ಮೇಳನ ಪೂರಕವಾಗಿದೆ ಎಂದರು.
ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ರಾಹುಲ್ ಉಪಸ್ಥಿತರಿದ್ದರು.







