ಮಾರ್ಚ್‌ನಿಂದ ಅನ್ನಭಾಗ್ಯದ 5 ಕೆಜಿ ಹೆಚ್ಚುವರಿ ಅಕ್ಕಿ

ಮಂಗಳೂರು, ಮಾ.6: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರವು ಫೆಬ್ರವರಿ ತಿಂಗಳಿನಿಂದ ನೇರ ನಗದು ವರ್ಗಾವಣೆಯ ಬದಲಿಗೆ 5 ಕೆ.ಜಿ ಹೆಚ್ಚುವರಿ ಅಕ್ಕಿ ಹಂಚಿಕೆಯನ್ನು ಕೊಡುವ ನಿರ್ಧಾರವನ್ನು ಮಾಡಿದೆ.
ಅದರಂತೆ ಫೆಬ್ರವರಿ ತಿಂಗಳ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಮಾರ್ಚ್‌ನಲ್ಲಿ ನೀಡುತ್ತಿರುವ ಪ್ರಮಾಣದೊಂದಿಗೆ ಹೆಚ್ಚುವರಿ ಯಾಗಿ ನೀಡಲಾಗುತ್ತದೆ.
ಮಾರ್ಚ್‌ನಲ್ಲಿ ಅಂತ್ಯೋದಯ ಪಡಿತರ ಚೀಟಿಗಳಲ್ಲಿ 4ಕ್ಕಿಂತ ಕಡಿಮೆ ಸದಸ್ಯರಿದ್ದಲ್ಲಿ ಈಗಾಗಲೇ ನೀಡುತ್ತಿರುವ 35 ಕೆ.ಜಿ ಮಾತ್ರ. ಅಂತ್ಯೋದಯ ಪಡಿತರ ಚೀಟಿಗಳಲ್ಲಿ 4 ಹಾಗೂ ಅದಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಪ್ರತೀ ಸದಸ್ಯನಿಗೆ 10 ಕೆಜಿ ಯಂತೆ ಈಗಾಗಲೇ ನೀಡುತ್ತಿರುವ 35 ಕೆಜಿಯೊಂದಿಗೆ ಹೆಚ್ಚುವರಿಯಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಪ್ರಮಾಣ ದೊಂದಿಗೆ ಉಚಿತವಾಗಿ ಪಡೆಯಬಹುದು.
ಅದ್ಯತಾ ಪಡಿತರ ಚೀಟಿಗಳ ಪ್ರತೀ ಸದಸ್ಯನಿಗೆ ಈಗಾಗಲೇ ನೀಡುತ್ತಿರುವ 5 ಕೆಜಿಯೊಂದಿಗೆ ಹೆಚ್ಚುವರಿಯಾಗಿ 10 ಕೆಜಿ ಯನ್ನು ಉಚಿತವಾಗಿ ಪಡೆಯಬಹುದು. ಪ್ರತೀ ಪಡಿತರ ಚೀಟಿದಾರರು ಪಡಿತರ ಪಡೆಯುವಾಗ ನ್ಯಾಯಬೆಲೆ ಅಂಗಡಿಗಳಲ್ಲಿ ಜೀವಮಾಪನ ನೀಡುವ ತಂತ್ರಾಂಶದಲ್ಲಿ ತೋರ್ಪಡಿಸುವ ಪ್ರಮಾಣದನುಸಾರ ಪಡಿತರ ಪಡೆಯುವಂತೆ ಜಿಲ್ಲಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.





