ಮಂಗಳೂರು ನಗರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂ ಅನುದಾನ-ಸುರೇಶ್ ಬಿ.ಎಸ್.
►ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಲೋಕಾರ್ಪಣೆ

ಮಂಗಳೂರು,ನ.24: ಜಿಲ್ಲಾಡಳಿತ, ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸುಮಾರು 2 ಎಕರೆ ಜಾಗದಲ್ಲಿ 24.94 ಕೋಟಿ ರೂಪಾಯಿ ವೆಚ್ಚದಲ್ಲಿ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜು ಕೊಳವು ಇಂದು ಲೋಕಾರ್ಪಣೆ ಗೊಂಡಿತು.
ಈಜುಕೊಳದ ಉದ್ಘಾಟನೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಫರೀದ್ ಅವರ ಉಪಸ್ಥಿತಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು, ಮಂಗಳೂರು ನಗರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ ಮತ್ತು ಮಂಗಳೂರು ನಗರಾಭಿವೃದ್ಧಿಗೆ ಶೀಘ್ರದಲ್ಲೇ 25 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಗೆ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಪಾಲುದಾರಿಕೆ ಯೊಂದಿಗೆ ಮಂಜೂರಾದ ಒಂದು ಸಾವಿರ ಕೋಟಿ ರುಪಾಯಿಯಲ್ಲಿ 749 ಕೋಟಿ ರೂಪಾಯಿ ಈಗಾಗಲೇ ವೆಚ್ಚವಾಗಿದೆ. ಮಂಗಳೂರು ಮಹಾನಗರ ಪಾಲಿಕೆಗೆ ಆದಾಯ ಬರುವ ಯೋಜನೆಗಳು ಅಭಿವೃದ್ಧಿ ಯೋಜನೆಗಳ ಜೊತೆ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ನಿರ್ಮಾಣ ವಾಗಬೇಕಾಗಿದೆ ಎಂದರು.
ಮಂಗಳೂರು ನಗರ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಶೀಘ್ರದಲ್ಲೇ ರಾಜ್ಯ ಸರಕಾರದಿಂದ ಅನುದಾ ನ ಬಿಡುಗಡೆ ಮಾಡಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 24 ಕೆಲಸ ಪ್ರಗತಿಯಲ್ಲಿದೆ. ಮಂಗಳೂರು ನಗರ ಆಕರ್ಷಣೆ ಯ ಕೇಂದ್ರವಾಗಬೇಕು. ಸಾರ್ವಜನಿಕರಿಂದ ಬಂದ ಹಣ ಸಾರ್ವಜನಿಕರ ಅನುಕೂಲಕ್ಕಾಗಿ ಬಳಕೆಯಾಗಬೇಕು. ಅಭಿವೃದ್ಧಿಗೆ ಪಕ್ಷ ರಾಜಕಾರಣ ಅಡ್ಡಿಯಾಗಬಾರದು ಎಂದು ಹೇಳಿದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡುತ್ತಾ, ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಈಜು ಪಟುಗಳು ರೂಪುಗೊಳ್ಳಲು ಪೂರಕವಾಗಲಿ. ನಗರದ ಅಭಿವೃದ್ಧಿಗೆ ಆರ್ಥಿಕ ಚಟುವಟಿಕೆಗಳ ಜೊತೆ ಪ್ರವಾಸೋದ್ಯಮದ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಮಂಗಳೂರು ನಗರದ ಸೌಂದರ್ಯವನ್ನು ವೀಕ್ಷಿಸಲು ಸಾಧ್ಯವಿರುವ ಟಾಗೋರ್ ಪಾರ್ಕ್ ರೀತಿಯ ಒಂದು ಕೇಂದ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ 19ನೇ ರಾಷ್ಟ್ರೀಯ ಮಾಸ್ಟರ್ ಚಾಂಪಿಯನ್‍ಶಿಪ್ ಈಜು ಸ್ಪರ್ಧೆಯನ್ನು ಸಚಿವ ಸುರೇಶ್ ಬಿ.ಎಸ್ ಉದ್ಘಾಟಿಸಿದರು.
ಅಂತಾರಾಷ್ಟ್ರೀಯ ಈಜುಕೊಳ ಕಟ್ಟಡದ ವಿಶ್ರಾಂತಿ ಕೊಠಡಿಯನ್ನು ಲೋಕಸಭೆ ಸದಸ್ಯ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿ ಮಾತನಾಡುತ್ತಾ, ಮಂಗಳೂರು ಸ್ಮಾರ್ಟ್ ಸಿಟಿ ಮೂಲಕ ಒಳಾಂಗಣ ಕ್ರೀಡಾಂಗಣ, ಕಬಡ್ಡಿ ಕ್ರೀಡಾಂಗಣ, ಪಾರ್ಕಿಂಗ್ ಸಂಕೀರ್ಣ, ವಾಟರ್ ಫ್ರಂಟ್ ಯೋಜನೆ ಜೊತೆಗೆ ನಂತೂರಿನಲ್ಲಿ ಫ್ಲೈ ಓವರ್ ನಿರ್ಮಾಣ ವಾಗಲಿದೆ ಎಂದರು.
ನಗರದಲ್ಲಿ ವೃತ್ತಗಳ ನಿರ್ಮಾಣ, ನಗರಾಭಿವೃದ್ಧಿ ಯೋಜನೆಗಳು ಕೇಂದ್ರ ಸರಕಾರದ ದೂರದೃಷ್ಟಿಯ ಯೋಜನೆಗಳಾಗಿವೆ. ರಾಜ್ಯ ಸರಕಾರದ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.
ಈಜುಕೊಳ, ಜಿಮ್ ಕೊಠಡಿಯನ್ನು ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸಿದರು.
ಶಾಸಕ ಡಿ ವೇದವ್ಯಾಸ ಕಾಮತ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಂಗಳೂರು ಕೇಂದ್ರ ಮಾರುಕಟ್ಟೆ 115 ಕೋಟಿ ರೂ ವೆಚ್ಚ ದಲ್ಲಿ ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾದರಿಯಾಗಿ ನಿರ್ಮಾಣವಾಗಲಿದೆ. ಅದೇ ರೀತಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ಈಜು ಸ್ಪರ್ಧೆಯ ಸ್ಮರಣ ಸಂಚಿಕೆಯನ್ನು ರಾಜ್ಯ ಹಣಕಾಸು ಸಚಿವಾಲಯದ ಅಪರ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಅಧಿಕಾರಿ ಎಲ್.ಕೆ.ಅತೀಕ್ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಮನಪಾ ಉಪ ಮೇಯರ್, 19 ನೆ ರಾಷ್ಟ್ರೀಯ ಮಾಸ್ಟರ್ ಚಾಂಪಿಯನ್ ಶಿಫ್ ಈಜು ಸ್ಪರ್ಧೆ2023 ರ ಅಧ್ಯಕ್ಷ ತೇಜೋಮಯ, ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ದಿವಾಕರ ಪಾಂಡೇಶ್ವರ, ಅಬ್ದುಲ್ ಲತೀಫ್, ರೇವತಿ ಶ್ಯಾಮ್ ಸುಂದರ್, ರಾಜ್ಯ ಹಣಕಾಸು ಸಚಿವಾಲಯದ ಅಪರ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಅಧಿಕಾರಿ ಎಲ್.ಕೆ.ಅತೀಕ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ.ಕೆ, ಮನಪಾ ಆಯುಕ್ತ ಆನಂದ ಸಿ.ಎಲ್ ಉಪಸ್ಥಿತರಿದ್ದರು.
ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ ಸ್ವಾಗತಿಸಿದರು.ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.







