ಕೇಶವಾನಂದ ಭಾರತಿ ತೀರ್ಪಿಗೆ 50 ವರ್ಷ: ಡಿ.9ರಂದು ವಿಶೇಷ ಉಪನ್ಯಾಸ

ಮಂಗಳೂರು.ಡಿ.7: ಸಂವಿಧಾನದ ಮೂಲರಚನೆ ಸಿದ್ಧಾಂತವನ್ನು ರೂಪಿಸಿದ ಎಡನೀರು ಕೇಶವಾನಂದ ಭಾರತಿ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿಗೆ 50 ವರ್ಷ ಸಂದಿರುವ ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘ ಮತ್ತು ಎಡನೀರು ಮಠ ಕೇಶವಾನಂದ ಭಾರತಿ ತೀರ್ಪು ಸುವರ್ಣ ಸಂಭ್ರಮಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಡಿ. 9 ರಂದು ಬೆಳಗ್ಗೆ 9:30ಕ್ಕೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಪೃಥ್ವಿರಾಜ್ ರೈ ತಿಳಿಸಿದ್ದಾರೆ.
ನಗರದ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೇಶವಾನಂದ ಭಾರತಿ ತೀರ್ಪು ಮತ್ತು ಭಾರತೀಯ ಸಾಂವಿಧಾನಿಕ ನ್ಯಾಯಶಾಸ್ತ್ರದ ಬೆಳವಣಿಗೆ’ ಎಂಬ ವಿಷಯದ ಬಗ್ಗೆ ಗೋವಾದ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಮುಖ್ಯ ಉಪನ್ಯಾಸ ನೀಡಲಿರುವರು ಎಂದು ಮಾಹಿತಿ ನೀಡಿದರು.
ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಗೌರವ ಅತಿಥಿಗಳಾಗಿ ನಿಟ್ಟೆ ವಿವಿ ಕುಲಪತಿ ಎನ್.ವಿನಯ ಹೆಗ್ಡೆ, ಉಜಿರೆ ಎಸ್‌ಡಿಎಂಇ ಸೊಸೈಟಿ(ರಿ) ಇದರ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಎಮ್ ಲಾ ಕಾಲೇಜಿನ ಪ್ರಾಂಶುಪಾಲ ಡಾ. ತಾರಾನಾಥ, ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ ಉಪಸ್ಥಿತರಿದ್ದರು.







