ಮೂಳೂರು ಮಠದಗುಡ್ಡ: 6 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ಮಂಗಳೂರು: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‌ನ ಸರ್ವೇ ನಂಬ್ರ 133ರಲ್ಲಿ ಐದು ವರ್ಷದ ಹಿಂದೆ ಸಂಭವಿಸಿದ ಗುಡ್ಡ ಕುಸಿತದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ 6 ಕುಟುಂಬ ಗಳಿಗೆ ಬುಧವಾರ ಗ್ರಾಪಂ ಸಭಾಂಗಣದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ನಿವೇಶನಸಹಿತ ಹಕ್ಕುಪತ್ರ ವಿತರಿಸಿದರು.
ಬಳಿಕ ಮಾತನಾಡಿದ ಅವರು ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿವೇಶನ ಮತ್ತು ಹಕ್ಕುಪತ್ರ ಒದಗಿಸಿ ಕೊಡುವಲ್ಲಿ ಗ್ರಾಪಂನ ಎಲ್ಲ ಅಧ್ಯಕ್ಷರ ಸಹಿತ ಸದಸ್ಯರು ಪಕ್ಷಾತೀತವಾಗಿ ಶ್ರಮಿಸಿದ್ದಾರೆ. ಅಧಿಕಾರಿಗಳ ಶ್ರಮದ ಶ್ರಮವೂ ಇದೆ. ಮನೆ ಕಳೆದುಕೊಂಡ ಮಠದಗುಡ್ಡೆಯ ಸಂತ್ರಸ್ತರಿಗೆ ಈ ಹಿಂದೆ ಗಂಜಿಮಠ ಮತ್ತು ನೀರುಮಾರ್ಗ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಜಾಗ ನೋಡಿದ್ದರೂ ಅಲ್ಲಿನ ನಾಗರಿಕರ ವಿರೋಧವಿತ್ತು. ಹಾಗಾಗಿ ಆ ಪ್ರಸ್ತಾವ ಕೈಬಿಡಲಾಗಿತ್ತು. ತಾಂತ್ರಿಕ ತೊಡಕು ನಿವಾರಿಸಿ ಉಳಿದ 5 ಕುಟುಂಬಗಳಿಗೆ ಶೀಘ್ರ ಹಕ್ಕುಪತ್ರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಸಫರಾ ಮದಕ, ಗ್ರಾಪಂ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ಪಂಕಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





