ದ.ಕ. ಜಿಲ್ಲೆ| 6 ತಿಂಗಳಲ್ಲಿ 85 ಮಂದಿ ಹೃದಯಾಘಾತಕ್ಕೆ ಬಲಿ

ಸಾಂದರ್ಭಿಕ ಚಿತ್ರ
ಮಂಗಳೂರು, ಜು.2: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ತಿಂಗಳಲ್ಲಿ 580 ಮಂದಿಗೆ ಹೃದಯಾಘಾತವಾಗಿದ್ದು, ಈ ಪೈಕಿ 85 ಮಂದಿ ಮೃತಪಟ್ಟಿದ್ದಾರೆ.
‘ವಾರ್ತಾಭಾರತಿ’ಗೆ ಮಾಹಿತಿ ನೀಡಿರುವ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಅವರು ಈ ಬಗ್ಗೆ ಆತಂಕಪಡಬೇಕಾಗಿಲ್ಲ. ಜೀವನ ಶೈಲಿಯಲ್ಲಿ ಬದಲಾವಣೆ, ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಹೃದಯಾಘಾತದಿಂದ ಪಾರಾಗಬಹುದು ಎಂದು ಹೇಳಿದ್ದಾರೆ.
ಮೃತಪಟ್ಟವರಲ್ಲಿ ಯುವ ಸಮೂಹ ಬಹಳ ಕಡಿಮೆ. ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 2025 ಜನವರಿ 1ರಿಂದ ಜೂನ್ 30ರ ತನಕದ 580 ಮಂದಿಗೆ ಹೃದಯಾಘಾತವಾಗಿದೆ. ಈ ಪೈಕಿ 495 ಮಂದಿ ಚೇತರಿಸಿಕೊಂಡಿದ್ದಾರೆ. ಮೃತಪಟ್ಟಿರುವ 85 ಮಂದಿಯ ಪೈಕಿ ಪುರುಷರು 54 ಮತ್ತು ಮಹಿಳೆಯರು 31 ಮಂದಿ ಎಂದು ತಿಳಿಸಿದ್ದಾರೆ.
ಆರು ತಿಂಗಳಲ್ಲಿ 61-85 ವಯಸ್ಸಿನವರು ಹೆಚ್ಚು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 61-85 ವಯಸ್ಸಿನ ಹಿರಿಯ ನಾಗರಿಕರು 47 ಮಂದಿ ಬಲಿಯಾಗಿದ್ದಾರೆ. 30ರ ಹರೆಯದ ಒಬ್ಬರು ಮೃತಪಟ್ಟಿದ್ದಾರೆ, 30-40 ವಯಸ್ಸಿನವರು 3 ಮಂದಿ, 41-50ರ ಹರೆಯದವರು 16 ಮತ್ತು 51-60 ವಯಸ್ಸಿನ 18 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದಾಖಲಿಸಿರುವ ಅಂಕಿ ಅಂಶಗಳು ತಿಳಿಸಿದೆ.





