ಹೊಸಬೆಟ್ಟು ಗ್ರಾಮಸಭೆ| ಹಕ್ಕುಪತ್ರ ಸಿಕ್ಕಿ 7ವರ್ಷ ಕಳೆದರೂ ಇನ್ನೂ ಸಿಗದ ನಿವೇಶನ; ಅಪೂರ್ಣ ಸಮೀಕ್ಷೆಗೆ ಗ್ರಾಮಸ್ಥರ ಆಕ್ರೋಶ

ಮೂಡುಬಿದಿರೆ: 16ವರ್ಷಗಳಿಂದ ನಿವೇಶನಕ್ಕಾಗಿ ಪಂಚಾಯತ್ ಗೆ ಅಲೆದಾಡುತ್ತಿದ್ದು, 7ವರ್ಷಗಳ ಹಿಂದೆ ಹಕ್ಕು ಪತ್ರ ನೀಡಲಾಗಿದ್ದು, ಇನ್ನೂ ನಿವೇಶನ ನೀಡಿಲ್ಲ ಎಂದು ಮಹಿಳೆಯೊಬ್ಬರು ಹೊಸಬೆಟ್ಟು ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ಅಧ್ಯಕ್ಷೆ ಸೌಮ್ಯ ಸದಾಶಿವ ಪೂಜಾರಿ ಅಧ್ಯಕ್ಷತೆಯಲ್ಲಿ ಗುರುವಾರ ಹೋಲಿ ಕ್ರಾಸ್ ಚರ್ಚ್ ಸಭಾಂಗಣ ದಲ್ಲಿ ನಡೆದ ಹೊಸಬೆಟ್ಟು ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥೆ ಪ್ರೇಮಾ ಅವರು ನಿವೇಶನ ನೀಡದಿರುವ ಬಗ್ಗೆ ಅಳಲನ್ನು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಚಂದ್ರಹಾಸ ಸನಿಲ್ ಅವರು, ಹಿಂದೆ ನಿವೇಶನಕ್ಕಾಗಿ 5 ಎಕರೆ ಜಾಗ ಮಂಜೂರಾಗಿತ್ತು. ಆದರೆ, ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಅದನ್ನು ತಡೆ ಹಿಡಿಯಲಾಗಿತ್ತು. ಈಗ ನಿವೇಶನ ನೀಡಲು ಕರಿಂಗಣದಲ್ಲಿ ಜಾಗ ಗುರುತಿಸಲಾಗಿದ್ದು, ಗ್ರಾಮ ಪಂಚಾಯತ್ ಕಟ್ಟದ ಮತ್ತು 65ಮಂದಿ ಫಲಾನುಭವಿಗಳಿಗೆ ನಿವೇಶನವನ್ನೂ ಒದಗಿಸಲಾಗುವುದು ಎಂದರು.
ಯಾರಾದರೂ ಮೃತಪಟ್ಟಾಗ ಮರಣೋತ್ತರ ಪರೀಕ್ಷೆ ನಡೆಸಲು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಇಲ್ಲಿ ಖಾಯಂ ವೈದ್ಯರನ್ನು ನೇಮಕ ಮಾಡಬೇಕು ಎಂದು ಸದಸ್ಯ ರೆಕ್ಸನ್ ಪಿಂಟೋ ಆಗ್ರಹಿಸಿದರು. ಈ ವೇಳೆ ಮಾತನಾಡಿದ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಅವರು, ಕುಪ್ಪೆಪದವು, ಕಲ್ಲಮುಂಡ್ಕೂರು, ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಬಂದು ಮರೋತ್ತರ ಪರೀಕ್ಷೆ ನಡೆಸುತ್ತಾರೆ. ಕೆಲವೊಮ್ಮೆ ವಿಳಂಬವಾಗಿರಬಹುದು. ಪ್ರಸ್ತುತ ಮರಣೋತ್ತರ ಪರೀಕ್ಷೆಗಳು ಇದ್ದಲ್ಲಿ ಅವರಿಗೆ ತುರ್ತು ಮಾಹಿತಿ ನೀಡಲಾಗುತ್ತಿದೆ ಎಂದರು.
45 ವರ್ಷಗಳಿಗೂ ಹಳೆಯದಾದ ವಿದ್ಯುತ್ ತಂತಿಗಳು ಜೋತು ಬಿದ್ದಿವೆ ಎಂದು ಗ್ರಾಮಸ್ಥ ಮೆನೇಜಸ್ ಸಭೆಯಲ್ಲಿ ಪ್ರಸ್ತಾಪಿಸಿದರು. ಕರಿಂಗಣ 5 ಸೆಂಟ್ಸ್ ಪ್ರದೇಶದಲ್ಲಿ ಮಳೆ-ಗಾಳಿಗೆ ವಿದ್ಯುತ್ ಕಂಬವೊಂದು ವಾಲಿ ಮರದಲ್ಲಿ ಸಿಲುಕಿಕೊಂಡಿದೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ತೆರವು ಮಾಡಿಲ್ಲ. ಇಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಮೆಸ್ಕಾಂ ಇಲಾಖೆ ನೇರಹೊಣೆ ಎಂದು ಆಶಾ ಕಾರ್ಯಕತೆ೯ ಯಶೋಧಾ ಅವರು ಅಧಿಕಾರಿಗಳನ್ನು ತರಾಟೆಗೆತೆಗೆದುಕೊಂಡರು. ಮಳೆಗಾಳದಲ್ಲಿ ವಿದ್ಯುತ್ ಖಡಿತವಾಗಿ ಸಮಸ್ಯೆಯಾದಾಗ ಮೆಸ್ಕಾಂಗೆ ಕರೆ ಮಾಡಿ ತಿಳಿಸಿದಾಗ ಮೆಸ್ಕಾಂ ಎಸ್ಒ ಅವರು ಉಡಾಫೆಯಾಗಿ ಮಾತನಾಡುತ್ತಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಇಂತಹ ಅಧಿಕಾರಿಗಳು ಇಲ್ಲಿಗೆ ಬೇಡ ಅವರನ್ನು ಬದಲಾಯಿಸುವಂತೆ ಗ್ರಾಮಸ್ಥ ಸದಾಶಿವ ಪೂಜಾರಿ ಅವರುಇ ಆಗ್ರಹಿಸಿದರು. ಹಲವು ಕಡೆ ಹಳೇ ತಂತಿಗಳನ್ನು ಬದಲಾಯಿಸುತ್ತಿದ್ದೇವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಮೆಸ್ಕಾಂ ಅಧಿಕಾರಿ ಪ್ರವೀಣ್ ಎಂ. ಭರವಸೆ ನೀಡಿದರು.
ಸಭೆಯ ನೊಡೇಲ್ ಅಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್. ಅವರು ಭಾಗವಹಿಸಿದ್ದರು. ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ಮೀನಾಕ್ಷಿ, ಸಚ್ಚೀಂದ್ರ ಪೂಜಾರಿ, ಹರಿಣಾಕ್ಷಿ, ಪ್ರದೀಪ್ ಪೂಜಾರಿ, ರುಕ್ಯಾ ಇಬ್ರಾಹಿಂ, ಯಶೋಧಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶ್ರೀಧರ್ ಅನಗೌಡರ್ ನಿರೂಪಿಸಿದರು. ಸಿಬ್ಬಂದಿ ಸಂಜೀವ್ ನಾಯ್ಕ್ ಜಮಾ ಖರ್ಚು ವಿವರ ಮಂಡಿಸಿದರು.
10ಜನರಿರುವ ಮನೆಯಲ್ಲಿ 5 ಮಂದಿಯ ಸಮೀಕ್ಷೆ: ಗ್ರಾಮಸ್ಥರ ಆಕ್ರೋಶ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ - ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲೋಪದೋಷ ಗಳಾಗುತ್ತಿವೆ. ಒಂದೇ ಮನೆಯಲ್ಲಿ ಹತ್ತು ಜನರಿದ್ದರೂ 5 ಜನರ ಸಮೀಕ್ಷೆ ಮಾತ್ರ ಮಾಡಲಾಗಿದೆ ಎಂದು ಗ್ರಾಮಸ್ಥ ಲಿಯೋ ವಾಲ್ಟರ್ ನಜ್ರತ್ ಅವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಎರಡು ದಿನಗಳಲ್ಲಿ ಸಮೀಕ್ಷೆ ಮುಗಿಯಲಿದ್ದು, ನಮ್ಮ ಗ್ರಾಮದಲ್ಲಿ ಸಮೀಕ್ಷೆ ಅಪೂರ್ಣವಾಗಿದೆ. ನಮ್ಮ ಮನೆ ಸದಸ್ಯರಲ್ಲಿ ಶೇ.50 ಮಂದಿಯ ಸಮೀಕ್ಷೆ ನಡೆದಿಲ್ಲ. ಸರಿಯಾದ ರೀತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದಿದ್ದರೆ ಯಾಕೆ ಅಂತಹ ಯೋಜನೆಗಳನ್ನು ತರಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಪಿಡಿಒ ಸವಿತಾ ಕುಮಾರಿ ಎಂ. ಅವರು, ಸಮೀಕ್ಷೆಯನ್ನು ಮುಂದುವರಿಸಲು ಪಂಚಾಯತ್ ಕಾರ್ಯಾಲಯದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಈ ಸಂಬಂಧ ಇಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಉತ್ತರಿಸಿದರು.
ಸಮೀಕ್ಷೆಯನ್ನು ನಾವು ಬಹಿಷ್ಕರಿಸುತ್ತೇವೆ :-
"ನಮ್ಮ ಗ್ರಾಮದಲ್ಲಿ ಸಮೀಕ್ಷೆ ಸೂಕ್ತ ರೀತಿಯಲ್ಲಿ ನಡೆದಿಲ್ಲ. ಪಂಚಾಯತ್ ಗೆ ಬಂದು ದಿನವಿಡೀ ಕುಳಿತುಕೊಳ್ಳಲು ನಮಗೆ ಸಾಧ್ಯವಿಲ್ಲ. ಇಂತಹ ಲೋಪವಿರುವ ಸಮೀಕ್ಷೆಯನ್ನು ನಾವು ಮಾಡಿಸುವುದಿಲ್ಲ ನಾವಿದನ್ನು ಬಹಿಷ್ಕರಿಸುತ್ತೇವೆ".
-ಮನೋಹರ್ ಕುಟಿನ್ಹ, ಗ್ರಾಮಸ್ಥ







