ಎಸ್ಸಿಡಿಸಿಸಿ ಬ್ಯಾಂಕ್ ಗೆ 79.09 ಕೋಟಿ ರೂ. ಸಾರ್ವಕಾಲಿಕ ದಾಖಲೆಯ ಲಾಭ: ಎಂ.ಎನ್. ರಾಜೇಂದ್ರ ಕುಮಾರ್
![ಎಸ್ಸಿಡಿಸಿಸಿ ಬ್ಯಾಂಕ್ ಗೆ 79.09 ಕೋಟಿ ರೂ. ಸಾರ್ವಕಾಲಿಕ ದಾಖಲೆಯ ಲಾಭ: ಎಂ.ಎನ್. ರಾಜೇಂದ್ರ ಕುಮಾರ್ ಎಸ್ಸಿಡಿಸಿಸಿ ಬ್ಯಾಂಕ್ ಗೆ 79.09 ಕೋಟಿ ರೂ. ಸಾರ್ವಕಾಲಿಕ ದಾಖಲೆಯ ಲಾಭ: ಎಂ.ಎನ್. ರಾಜೇಂದ್ರ ಕುಮಾರ್](https://www.varthabharati.in/h-upload/2024/04/04/1258418-psx20240404130025.webp)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್) ಮಾರ್ಚ್ 2024 ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.79.09 ಕೋಟಿ ಲಾಭ ಗಳಿಸಿದೆ. ಇದು ಕಳೆದ ವರ್ಷದ ಲಾಭ (ರೂ.61.29 ಕೋಟಿ) ಕ್ಕಿಂತ ಶೇಕಡಾ 29.04 ಏರಿಕೆಯಾಗಿದೆ. ಇದು ಎಸ್ ಸಿಡಿಸಿಸಿ ಬ್ಯಾಂಕ್ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಯಾಗಿದೆ ಎಂದು ಎಸ್ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರಕುಮಾರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬ್ಯಾಂಕ್ ಅಭಿವೃದ್ಧಿಯ ಮುಂಚೂಣಿಯ ಲ್ಲಿದ್ದು, ತನ್ನ 110 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ತನ್ನ 113 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿರುವ ಎಸ್ ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆಗೈದಿದೆ.
ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್ ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ರೂ.15540.80 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ (ರೂ.13514.51 ಕೋಟಿ) ಈ ಬಾರಿ ಶೇ.14.99 ಏರಿಕೆಯನ್ನು ಕಂಡಿದೆ. 2024-25ನೇ ಸಾಲಿಗೆ ರೂ.18,000.00 ಕೋಟಿ ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದರು.
ಠೇವಣಿಗಳ ಸಂಗ್ರಹಣೆಯಲ್ಲಿ ಎಲ್ಲಾ ಬ್ಯಾಂಕ್ ಗಳಲ್ಲೂ ಸ್ಪರ್ಧೆ ಇದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಎಸ್ ಸಿಡಿಸಿಸಿ ಬ್ಯಾಂಕ್ ತನ್ನ 113 ಶಾಖೆಗಳ ಮುಖಾಂತರ ಒಟ್ಟು ರೂ.7221.37 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ. ಈ ಮೂಲಕ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಣೆಗಿಂತ ಈ ಬಾರಿ ಶೇ 13.33 ಏರಿಕೆ ಯಾಗಿದೆ.ಸ್ಪರ್ಧಾತ್ಮಕ ವ್ಯವಹಾರದಲ್ಲಿ ಬ್ಯಾಂಕ್ ರೂ.6485.12 ಕೋಟಿ ಮುಂಗಡ ನೀಡಿದೆ. ಕೃಷಿಯೇತರ ಸಾಲಗಳ ಹೊರಬಾಕಿ ರೂ.8319.43 ಕೋಟಿಯಾಗಿರುತ್ತದೆ.
ಸತತ 29 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇಕಡಾ 100ರ ಸಾಧನೆ 100 ಮರುಪಾವತಿಯನ್ನು ಕಂಡು ದಾಖಲೆ ನಿರ್ಮಿಸಿ ಸಾಧನೆಗೈದಿದೆ. ಇಂತಹ ಸಾಧನೆಯನ್ನು ಕಳೆದ 20 ವರ್ಷಗಳಿಂದ ಬ್ಯಾಂಕ್ ಸತತವಾಗಿ ಮಾಡಿ ರುವುದು ರಾಷ್ಟ್ರೀಯ ದಾಖಲೆಯಾಗಿದೆ ಎಂದು ಡಾ.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಬ್ಯಾಂಕ್ಗೆ ಒಟ್ಟು 1072 ಸಂಘಗಳು ಸದಸ್ಯರಾಗಿವೆ. ಇವುಗಳ ಪಾಲು ಬಂಡವಾಳ ರೂ.403.59 ಕೋಟಿ ಆಗಿರುತ್ತದೆ. ದುಡಿಯುವ ಬಂಡವಾಳ ರೂ.11379.23 ಕೋಟಿ ಆಗಿದ್ದು, ಇದು ಕಳೆದ ವರ್ಷಕ್ಕಿಂತ (ರೂ.9930.69 ಕೋಟಿ) ಶೇಕಡ 14.59% ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ ರೂ.261.00 ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ. ಶೇಕಡ 8.39% ರಷ್ಟು ಏರಿಕೆ ಕಂಡಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ 1,37,010 ರುಪೇ ಕಿಸಾನ್ ಕಾರ್ಡ್ ಗಳನ್ನು ರೈತರಿಗೆ ವಿತರಿಸಲಾಗಿದೆ. 80,668 ರುಪೇ ಡೆಬಿಟ್ ಕಾರ್ಡ್ ಗಳನ್ನು ಬ್ಯಾಂಕ್ನ ಇತರ ಗ್ರಾಹಕರಿಗೆ ನೀಡಲಾಗಿದೆ.
*ಬ್ಯಾಂಕಿನ ಸಾಧನೆ:- ಬ್ಯಾಂಕಿಗೆ 21 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 19 ಬಾರಿ ನಬಾರ್ಡ್ ಪ್ರಶಸ್ತಿ ದೊರೆತಿದೆ. ಎರಡು ಬಾರಿ "ಎಫ್ಸಿಬಿಎ" ರಾಷ್ಟ್ರೀಯ ಪ್ರಶಸ್ತಿಯಿಂದ ಬ್ಯಾಂಕ್ ಪುರಸ್ಕೃತಗೊಂಡಿದೆ.ಬ್ಯಾಂಕಿನ ಸರ್ವಾಂಗೀಣ ಸಾಧನೆಗಾಗಿ ಎರಡು ಬಾರಿ ಪ್ರತಿಷ್ಠಿತ "ಬ್ಯಾಂಕ್ ಬ್ಲೂ ರಿಬ್ಬನ್ ಪ್ರಶಸ್ತಿ" ಲಭಿಸಿದೆ.ಕೇಂದ್ರ ಸರಕಾರದ ಮಹಕ್ಷರ ಯೋಜನೆಯಾದ "ಅಟಲ್ ಪಿಂಚಣಿ ಯೋಜನೆ'ಯ ಸಮರ್ಪಕವಾಗಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ನೊಂದಾಯಿಸಿದ ವರ್ಷದಲ್ಲಿ 2 ಬಾರಿ ಭಾರತ ಸರ್ಕಾರದ ಹಣಾಕಾಸು ಸಚಿವಾಲಯದಿಂದ ಪ್ರಶಸ್ತಿಗೆ ಪಾತ್ರವಾಗಿದೆ.ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ ಬ್ಯಾಂಕ್ಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಬ್ಯಾಂಕ್ ಒಟ್ಟು 34,474 ಗುಂಪುಗಳನ್ನು ಹೊಂದಿದೆ.
156063 ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡು,ಮತ್ತು ಕಾರ್ಡ್ ದಾರರಿಗೆ ವೈಯುಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ.ಬ್ಯಾಂಕಿನ ಎಲ್ಲಾ ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡಿದೆ.
ಬ್ಯಾಂಕಿನ 19 ಶಾಖೆಗಳು ಸಂಪೂರ್ಣ ಹವಾನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತಿವೆ.
ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ ಎನ್ನುವ ಆಶಯದೊಂದಿಗೆ ಸುಸಜ್ಜಿತ ವಾಹನದಲ್ಲಿ (Bank on Wheel) ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಯನ್ನು ಹಾಗೂ ಎ.ಟಿ.ಎಂ. ಸೌಲಭ್ಯವನ್ನು ಕಾರ್ಯರೂಪಕ್ಕೆ ತಂದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಇದೆ. ಬ್ಯಾಂಕ್ ಸಿಬ್ಬಂದಿಗಳಿಗೆ ಪಿಂಚಣಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ರಾಜ್ಯದ ಮೊದಲ ಕೇಂದ್ರ ಸಹಕಾರಿ ಬ್ಯಾಂಕ್.
ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವವರಿಗೆ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಸುಸಜ್ಜಿತ ತರಬೇತಿ ಕೇಂದ್ರವನ್ನು ಬ್ಯಾಂಕ್ ಹೊಂದಿದೆ.
ವ್ಯವಹಾರವನ್ನು ಸರಳೀಕರಿಸುವ ನಿಟ್ಟಿನಲ್ಲಿ ಟ್ಯಾಬ್ ಬ್ಯಾಂಕ್ ಕಿಂಗ್ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಿದೆ.
ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾಯಿಸಲು ಮತ್ತು ಮೊಬೈಲ್ ಮುಖಾಂತರವೇ ಗ್ರಾಹಕರ ಖಾತೆಯ ವ್ಯವಹಾರದ ವಿಚಾರಣೆಗೆ ಮೊಬೈಲ್ ಅ್ಯಪ್ ಪರಿಚಯಿಸಿದೆ. ಈಗಾಗಲೇ ಉಭಯ ಜಿಲ್ಲೆಗಳ 14 ಶಾಖೆಗಳಲ್ಲಿ ಎ.ಟಿ.ಎಂ. ಅಳವಡಿಸಲಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.
*ಮುಂದಿನ ಯೋಜನೆಗಳು:-
ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ, ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (BBPS) ಯೋಜನೆ, ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದುಡಾ| ಎಂ. ಎನ್. ರಾಜೇಂದ್ರ ಕುಮಾರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಆಡಳಿತಮಂಡಳಿಯ ನೂತನ ನಿರ್ದೇಶಕರುಗಳಾದ ವಿನಯ ಕುಮಾರ್ ಸೂರಿಂಜೆ, ಭಾಸ್ಕರ ಎಸ್. ಕೋಟ್ಯಾನ್, ಕೆ. ಹರಿಶ್ಚಂದ್ರ, ಟಿ.ಜಿ. ರಾಜರಾಮ ಭಟ್ ,ದೇವಿ ಪ್ರಸಾದ್ ಶೆಟ್ಟಿ, ಬಿ. ಅಶೋಕ್ ಕುಮಾರ್ ಶೆಟ್ಟಿ, ಶಶಿಕುಮಾರ್ ರೈ.ಬಿ. ಎಸ್. ರಾಜು ಪೂಜಾರಿ, ಎಂ.ವಾದಿರಾಜ ಶೆಟ್ಟಿ, ಕುಶಾಲಪ್ಪ ಗೌಡ,ಎಸ್.ಎನ್. ಮನ್ಮಥ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ ,ಎಸ್.ಬಿ. ಜಯರಾಮ ರೈ ,ಸದಾಶಿವ ಉಳ್ಳಾಲ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.